ಕ್ರೀಡೆ

ಮಾವನ ಹತ್ಯೆ, ಅತ್ತೆಯ ಪರಿಸ್ಥಿತಿ ತೀವ್ರ ಗಂಭೀರ: ಇದು ಸುರೇಶ್​ ರೈನಾ ವಾಪಸ್​ ಆಗಲು ಕಾರಣ

lakshmihegde

ದುಬೈನಲ್ಲಿ ನಡೆಯಲಿರುವ ಐಪಿಎಲ್​​ನಲ್ಲಿ ಆಡಲು ಆಗಸ್ಟ್​ 21ರಂದು ತೆರಳಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಉಪನಾಯಕ ಸುರೇಶ್​ ರೈನಾ ಇಂದು ವಾಪಸ್​ ಆಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಸುರೇಶ್​ ರೈನಾ ಭಾರತಕ್ಕೆ ಮರಳುತ್ತಿದ್ದಾರೆ. ಟೂರ್ನಿಯಲ್ಲಿ ಲಭ್ಯ ಇರುವುದಿಲ್ಲ ಎಂದು ಸಿಎಸ್​ಕೆ ಸಿಇಒ ಕೆ.ಎಸ್​.ವಿಶ್ವನಾಥ್​ ಅವರು ಟ್ವೀಟ್​ ಮಾಡಿ ಖಚಿತ ಪಡಿಸಿದ್ದರು.

ಅಷ್ಟಕ್ಕೂ ಆ ವೈಯಕ್ತಿಕ ಕಾರಣವೇನು? ಏಕಾಏಕಿ ರೈನಾ ಅವರು ತಂಡದಿಂದ ವಾಪಸ್​ ಆಗುವಂಥದ್ದೇನಾಗಿದೆ ಎಂಬುದು ಇದೀಗ ಬಹಿರಂಗಗೊಂಡಿದೆ.

ಪಠಾಣ್​ಕೋಟ್​ನ ಥಾರಿಯಲ್​ ಗ್ರಾಮದಲ್ಲಿ ನೆಲೆಸಿದ್ದ ರೈನಾ ಅವರ ಹತ್ತಿರದ ಸಂಬಂಧಿಕರ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರ ಮಾವ ಮೃತಪಟ್ಟಿದ್ದಾರೆ. ಅತ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಸುರೇಶ್​ ರೈನಾ ತಂದೆಯ ಸಹೋದರಿಯ ಕುಟುಂಬದ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಇಡೀ ಕುಟುಂಬದವರು ಮನೆಯ ಟೆರೇಸ್​ ಮೇಲೆ ಮಲಗಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ರೈನಾ ಮಾವ ಅಶೋಕ್​ ಕುಮಾರ್​ ಮೃತಪಟ್ಟಿದ್ದರೆ, ಅತ್ತೆ ಆಶಾ ದೇವಿ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಶೋಕ್​ ಕುಮಾರ್​ ಅವರ 80 ವರ್ಷದ ತಾಯಿ, ಕಸಿನ್​​ಗಳಾದ ಕೌಶಾಲ್​ ಕುಮಾರ್ (32), ಅಪಿನ್​ ಕುಮಾರ್​ (24) ತೀವ್ರ ಗಾಯಗೊಂಡಿದ್ದಾರೆ.

ಮೃತರು ಸುರೇಶ್​ ರೈನಾ ಅವರ ಹತ್ತಿರದ ಸಂಬಂಧಿಗಳು ಎಂದು ತಿಳಿದ ಮೇಲೆ ಪೊಲೀಸರು ತಮ್ಮ ತನಿಖೆಯನ್ನು ವೇಗಗೊಳಿಸಿದ್ದಾರೆ. ಈಗಾಗಲೇ ಸ್ಥಳಕ್ಕೆ ಬೆರಳಚ್ಚು ತಜ್ಞರು, ಮತ್ತಿತರರು ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಶ್ವಾನಗಳಿಂದಲೂ ಪರೀಕ್ಷೆ ಮಾಡಿಸಲಾಗಿದ್ದು, ಸದ್ಯಕ್ಕಂತೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)