ನವದೆಹಲಿ: ಟೀಮ್ ಇಂಡಿಯಾ ನಾಯಕರಲ್ಲಿ ಸೌರವ್ ಗಂಗೂಲಿ ಅವರಷ್ಟು ಬೆಂಬಲ ಎಂಎಸ್ ಧೋನಿಯಿಂದ ದೊರೆತಿರಲಿಲ್ಲ ಎಂದು ಬೌನ್ಸರ್ ಎಸೆದಿದ್ದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ಮತ್ತೊಂದು ಬೀಮರ್ ಹಾಕಿದ್ದಾರೆ. ಧೋನಿ ನಾಯಕರಾಗಿದ್ದಾಗ ಅವರಿಗೆ ಸುರೇಶ್ ರೈನಾ ನೆಚ್ಚಿನ ಆಟಗಾರನಾಗಿದ್ದರು. ಧೋನಿಯಿಂದ ರೈನಾ ಸಾಕಷ್ಟು ಬೆಂಬಲ ಪಡೆದಿದ್ದರು ಎಂದಿದ್ದಾರೆ.
2011ರ ವಿಶ್ವಕಪ್ ಸಮಯದಲ್ಲಿ ಧೋನಿ, ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾ ಅವರಿಬ್ಬರಲ್ಲಿ ಒಬ್ಬರನ್ನು ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳುವ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದರು ಎಂದು ಸೀಮಿತ ಓವರ್ ಕ್ರಿಕೆಟ್ನಲ್ಲಿ ಭಾರತ ಕಂಡ ಅತ್ಯುತ್ತಮ ಆಟಗಾರರೆನಿಸಿರುವ ಯುವರಾಜ್ ಬಹಿರಂಗಪಡಿಸಿದ್ದಾರೆ. ‘ಧೋನಿ ಯಾವಾಗಲೂ ರೈನಾರನ್ನು ಬೆಂಬಲಿಸುತ್ತಿದ್ದರು. ಆಗ ಯೂಸುಫ್ ಉತ್ತಮವಾಗಿಯೇ ಆಡುತ್ತಿದ್ದರು. ನಾನೂ ಉತ್ತಮವಾಗಿ ಆಡುತ್ತಿದ್ದೆ ಮತ್ತು ವಿಕೆಟ್ಗಳನ್ನು ಕಬಳಿಸುತ್ತಿದ್ದೆ. ರೈನಾ ಆಗ ಉತ್ತಮ ಫಾಮರ್್ನಲ್ಲಿರಲಿಲ್ಲ. ಎಡಗೈ ಸ್ಪಿನ್ನರ್ ತಂಡದಲ್ಲಿ ಇರದ ಕಾರಣದಿಂದಾಗಿ ಆಗ ನನ್ನನ್ನು ತಂಡಕ್ಕೆ ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು’ ಎಂದು ಯುವರಾಜ್, ರೈನಾಗಾಗಿ ಯೂಸುಫ್ ಪಠಾಣ್ 2011ರ ವಿಶ್ವಕಪ್ ನಡುವೆ ಭಾರತ ತಂಡದಿಂದ ಹೊರಬಿದ್ದುದಕ್ಕೆ ಕಾರಣ ನೀಡಿದ್ದಾರೆ. -ಪಿಟಿಐ
ಬ್ಯಾಟ್ ಪರಿಶೀಲಿಸಿದ್ದ ಮ್ಯಾಚ್ ರೆಫ್ರಿ!
2007ರ ಟಿ20 ವಿಶ್ವಕಪ್ನಲ್ಲಿ ಯುವರಾಜ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ನ ಓವರ್ನ ಎಲ್ಲ 6 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ದ್ದರು. ಈ ಪಂದ್ಯದ ಬಳಿಕ ಮ್ಯಾಚ್ ರೆಫ್ರಿ ಬಂದು ತಮ್ಮ ಬ್ಯಾಟ್ ಪರಿಶೀಲಿಸಿ ದ್ದರು ಎಂದು ಯುವಿ ಬಹಿರಂಗಪಡಿಸಿದ್ದಾರೆ. ‘ಆಸೀಸ್ ತಂಡದ ಆಗಿನ ಕೋಚ್ ನನ್ನ ಬಳಿ ಬಂದು ಬ್ಯಾಟ್ನಲ್ಲಿ ಫೈಬರ್ ಇದೆಯೇ ಎಂದು ಪರಿಶೀಲಿಸಿದ್ದರು. ಬ್ಯಾಟ್ ನಿಯಮಬದ್ಧವಾಗಿದೆಯೇ ಎಂದು ಕೇಳಿದ್ದರು. ಆಡಂ ಗಿಲ್ಕ್ರಿಸ್ಟ್ ಕೂಡ ಈ ಬ್ಯಾಟ್ ಎಲ್ಲಿ ಮಾಡಿಸಿದ್ದು ಎಂದು ಕೇಳಿದ್ದರು. ಬಳಿಕ ಮ್ಯಾಚ್ ರೆಫ್ರಿ ಕೂಡ ಬಂದು ನನ್ನ ಬ್ಯಾಟ್ ಪರಿಶೀಲಿಸಿದ್ದರು. ನಿಜ ಹೇಳಬೇಕೆಂದರೆ ನನಗೆ ನಿಜವಾಗಿಯೂ ಆ ಬ್ಯಾಟ್ ವಿಶೇಷವಾಗಿತ್ತು. 2011ರ ವಿಶ್ವಕಪ್ನಲ್ಲಿ ನಾನು ಆಡಿದ ಬ್ಯಾಟ್ ಕೂಡ ವಿಶೇಷವಾದುದು’ ಎಂದು ಯುವಿ ಹೇಳಿದ್ದಾರೆ.