ಕ್ರೀಡೆ

ನಾನು ಬದುಕಿರುವವರೆಗೂ ಇದನ್ನು ಮರೆಯಲು ಸಾಧ್ಯವಿಲ್ಲ: ಸುರೇಶ್ ರೈನಾ ಭಾವುಕ

ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿ ತಂದುಕೊಟ್ಟ ಭಾರತಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ಆಲ್​ರೌಂಡರ್​ ಸುರೇಶ್ ರೈನಾ, ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ವಿಶ್ವಕಪ್​ಗೆ ಮುತ್ತಿಟ್ಟ ಆಟಗಾರರಿಗೆ ಮನದಾಳದಿಂದ ಧನ್ಯವಾದ ಅರ್ಪಿಸಿದರು. ಈ ಮಧ್ಯೆ ಫೈನಲ್​ ಪಂದ್ಯದಲ್ಲಿ ನಡೆದ ಒಂದು ರೋಮಾಂಚನಕಾರಿ ಘಟನೆಯನ್ನು ನೆನಪಿಸಿಕೊಂಡ ರೈನಾ ಭಾವುಕರಾಗಿದ್ದಾರೆ.

ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಬಾಲ್​ಗಳಲ್ಲಿ 16 ರನ್​ಗಳ ಅಗತ್ಯವಿತ್ತು. ಈ ವೇಳೆ ಗೆಲುವಿನತ್ತ ಎದುರುನೋಡುತ್ತಿದ್ದ ದಕ್ಷಿಣ ಆಫ್ರಿಕಾ ಪರ ಡೇವಿಡ್​ ಮಿಲ್ಲರ್ ಸ್ಟ್ರೈಕ್​ನಲ್ಲಿದ್ದರು.​​ ಅಂತಿಮ ಓವರ್​ ಅನ್ನು ಕೈಗೆತ್ತಿಕೊಂಡ ಟೀಮ್ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ, ಉತ್ತಮ ಬೌಲಿಂಗ್ ಅಟ್ಯಾಕ್ ಮಾಡಿದರು. ಪಾಂಡ್ಯ ಹಾಕಿದ ಬಾಲ್​ಗೆ ಮಿಲ್ಲರ್​ ಸಿಕ್ಸರ್​ ಶಾಟ್ ಸಿಡಿಸಿದರು. ಇದು ಬೌಂಡರಿ ಲೈನ್​ನತ್ತ ಬರುತ್ತಿದ್ದದ್ದನ್ನು ಕಂಡ ಸೂರ್ಯಕುಮಾರ್​ ಯಾದವ್​, ಓಡಿಬಂದು ರೋಚಕವಾಗಿ ಕ್ಯಾಚ್​ ಹಿಡಿದರು. ಆ ಹಂತದಲ್ಲಿ ಟೀಮ್ ಇಂಡಿಯಾಗೆ ಗೆಲುವಿನ ಭರವಸೆ ಮೂಡಿಸಿದರು.

ಅಂತಿಮವಾಗಿ ಸೂರ್ಯಕುಮಾರ್ ಹಿಡಿದ ಕ್ಯಾಚ್​ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣವಾಯಿತು. ಇದನ್ನು ನೆನಪಿಸಿಕೊಂಡ ರೈನಾ, “ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಅನ್ನು ನನ್ನ ಜೀವವಿರುವವರೆಗೂ ಮರೆಯುವುದಿಲ್ಲ. 1983ರ ವಿಶ್ವಕಪ್‌ನ ಫೈನಲ್‌ನಲ್ಲಿ ಕಪಿಲ್ ದೇವ್ ವಿವಿಯನ್ ರಿಚರ್ಡ್ಸ್ ಅವರ ಸ್ಮರಣೀಯ ಕ್ಯಾಚ್ ಅನ್ನು ಇದು ನೆನಪಿಸಿತು" ಎಂದು ಭಾವುಕರಾಗಿ ನುಡಿದರು,(ಏಜೆನ್ಸೀಸ್).