ಕ್ರೀಡೆ

ಟಿ-20 ವಿಶ್ವಕಪ್​ನಲ್ಲಿ ನಮೀಬಿಯಾ ತಂಡಕ್ಕೆ ಬೆಂಬಲ ನೀಡಬೇಕೆಂದ ನೆಟ್ಟಿಗರು; ಕಾರಣ ಭಾರತಕ್ಕೆ ಬಂದಿರುವ 8 ಚೀತಾಗಳಂತೆ!

Bengaluru - General - Rama Kishan K V

ನವ ದೆಹಲಿ: ಟಿ-20 ವಿಶ್ವಕಪ್​ ಆರಂಭವಾಗಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅರ್ಹತೆ ಪಡೆದಿರುವ ತಂಡಗಳು ಈಗಾಗಲೇ ಒಂದೊಂದು ಅಭ್ಯಾಸ ಪಂದ್ಯವನ್ನೂ ಆಡಿದೆ. ಕೆಲವು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಲು ಅರ್ಹತಾ ಪಂದ್ಯಗಳನ್ನು ಆಡುತ್ತಿವೆ.

ಕ್ರಿಕೆಟ್​ ಮೈದಾನದಲ್ಲಿ ನಿಧಾನವಾಗಿ ಸದ್ದು ಮಾಡುತ್ತಿರುವ ತಂಡಗಳಲ್ಲಿ ನಮೀಬಿಯಾ ತಂಡವೂ ಒಂದು. ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ನಲ್ಲಿ ನಮೀಬಿಯಾ ತಂಡಕ್ಕೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಈ ಬಗ್ಗೆ ಕಳೆದೆರಡು ದಿನಗಳಿಂದ ಟ್ವಿಟರ್​ನಲ್ಲಿ ಚರ್ಚೆಗಳಾಗುತ್ತಿವೆ.

ಅರ್ಹತಾ ಸುತ್ತಿನ ಪಂದ್ಯದಲ್ಲಿ ನಮೀಬಿಯಾ ತಂಡ ಶ್ರೀಲಂಕಾ ತಂಡವನ್ನು ಎದುರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 7 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಶ್ರೀಲಂಕಾ ಗೆದ್ದು ಬಿಡುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ನಮೀಬಿಯಾ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಶ್ರೀಲಂಕಾ 108 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ನಮೀಬಿಯಾ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ವಿರುದ್ಧ ಗೆಲ್ಲುತ್ತಿದ್ದಂತೆ ನಮ್ಮ ಬೆಂಬಲ ನಮೀಬಿಯಾಕ್ಕೆ ಎಂದು ಅನೇಕ ಭಾರತೀಯರು ಹೇಳುತ್ತಿದ್ದಾರೆ. ಇದು ಅಚ್ಚರಿಯಾದರೂ ಸತ್ಯ. ಯಾಕೆಂದರೆ ಭಾರತದಲ್ಲಿ ಚೀತಾಗಳ ಸಂತತಿಯನ್ನು ವೃದ್ಧಿಸುವ ಸಲುವಾಗಿ ನಮೀಬಿಯಾ ಸರ್ಕಾರ 8 ಚೀತಾಗಳನ್ನು ಕಳುಹಿಸಿಕೊಟ್ಟಿತ್ತು. ಹೀಗಾಗಿ ನಮ್ಮ ಬೆಂಬಲ ನಮೀಬಿಯಾ ತಂಡಕ್ಕೆ ಎಂದು ಅನೇಕರು ಕಮೆಂಟ್ ಮಾಡುತ್ತಾ, ನಗೆಚಟಾಕಿ ಹಾರಿಸುತ್ತಿದ್ದಾರೆ.