ಹೈದರಾಬಾದ್: ಕೊನೇ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿರುವ ಸನ್ರೈಸರ್ಸ್ ಹೈದರಾಬಾದ್ ಮತ್ತು ಹ್ಯಾಟ್ರಿಕ್ ಗೆಲುವಿನೊಂದಿಗೆ ಲಯಕ್ಕೆ ಮರಳಿರುವ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಬುಧವಾರ ಮರುಮುಖಾಮುಖಿ ಆಗಲಿವೆ. ವಾರದ ಹಿಂದಷ್ಟೇ ವಾಂಖೆಡೆಯಲ್ಲಿ ನಡೆದ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಮುಂಬೈ ಗೆದ್ದಿತ್ತು. ಅದಕ್ಕೀಗ ತನ್ನ ತವರಿನ ಆರ್ಜಿಐ ಸ್ಟೇಡಿಯಂನಲ್ಲಿ ಸೇಡು ತೀರಿಸಿಕೊಳ್ಳುವುದು ಪ್ಯಾಟ್ ಕಮ್ಮಿನ್ಸ್ ಬಳಗದ ಹಂಬಲವಾಗಿದೆ.
ಟೂರ್ನಿಯ ಆರಂಭದಲ್ಲಿ 300 ರನ್ ಗಳಿಸುವ ಗುರಿ ಇಟ್ಟುಕೊಂಡಿದ್ದ ಸನ್ರೈಸರ್ಸ್ ಮೊದಲ ಪಂದ್ಯದಲ್ಲೇ 286 ರನ್ ಸಿಡಿಸಿ ಬೀಗಿತ್ತು. ಆದರೆ ನಂತರದಲ್ಲಿ 180&200ರ ಗಡಿ ದಾಟಿದರೆ ಸಾಕಪ್ಪ ಎಂಬಂಥ ಸ್ಥಿತಿ ಅದರದಾಗಿದೆ. ಪಂಜಾಬ್ ಎದುರು 245 ರನ್ ಚೇಸ್ ಮಾಡಿ ಗೆದ್ದಿದ್ದ ಸನ್ರೈಸರ್ಸ್ ಕಳೆದ ಪಂದ್ಯದಲ್ಲಿ ಮುಂಬೈ ಎದುರು 162 ರನ್ಗಳಿಗೆ ತೃಪ್ತಿಪಟ್ಟಿತ್ತು. ಸನ್ರೈಸರ್ಸ್ ತಂಡದ ಈ ಅಸ್ಥಿರ ನಿರ್ವಹಣೆಯೇ ಅದಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಅಭಿಷೇಕ್ ಶರ್ಮ, ಟ್ರಾವಿಸ್ ಹೆಡ್ ವಾಂಖೆಡೆಯಲ್ಲಿ ಪವರ್ಪ್ಲೇನಲ್ಲಿ ಬಿರುಸಿನ ಆಟವಾಡಲು ವಿಲರಾಗಿದ್ದರು. ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್ ರನ್ಬರ ಎದುರಿಸುತ್ತಿದ್ದರೆ, ಯುವ ಬ್ಯಾಟರ್ ಅನಿಕೇತ್ ವರ್ಮರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ತಂಡ ವಿಲವಾಗುತ್ತಿದೆ.
ವಾಂಖೆಡೆಯಲ್ಲಿ ಸನ್ರೈಸರ್ಸ್ಗೆ 17ನೇ ಓವರ್ ತನಕ ಒಂದೂ ಸಿಕ್ಸರ್ ಬಿಟ್ಟುಕೊಡದೆ ಬಿಗಿ ಬೌಲಿಂಗ್ ದಾಳಿ ಪ್ರದರ್ಶಿಸಿದ್ದ ಮುಂಬೈ, ಹೈದರಾಬಾದ್ನಲ್ಲೂ ಅಂಥದ್ದೇ ಕಾರ್ಯತಂತ್ರ ಮುಂದುವರಿಸುವ ಯೋಜನೆಯಲ್ಲಿದೆ. ಆದರೆ ಇಲ್ಲಿನ ಫ್ಲ್ಯಾಟ್ ಪಿಚ್ನಲ್ಲಿ ಮುಂಬೈ ಬೌಲರ್ಗಳಿಗೆ ಕಠಿಣ ಸವಾಲು ಎದುರಾಗಲಿದೆ. ಇನ್ನು ರೋಹಿತ್ ಶರ್ಮ ಕಳೆದ ಪಂದ್ಯದಲ್ಲಿ ಸಿಎಸ್ಕೆ ಎದುರು ಅಜೇಯ 76 ರನ್ ಸಿಡಿಸಿ ಲಯಕ್ಕೆ ಮರಳಿರುವುದು ಮುಂಬೈ ಪಾಳಯದಲ್ಲಿ ಸಂತಸ ಹರಡಿದೆ. ಜಸ್ಪ್ರೀತ್ ಬುಮ್ರಾ ಕೂಡ ವಿಕೆಟ್ ಕಬಳಿಸಿ ಮಿಂಚಿದ್ದರು. ಇದರೊಂದಿಗೆ ಮುಂಬೈ ತಂಡದ ಬಹುತೇಕ ತಲೆನೋವು ನಿವಾರಣೆಯಾಗಿದೆ. ಇನ್ನೀಗ ಗೆಲುವಿನ ಲಯ ಕಾಯ್ದುಕೊಳ್ಳಲು ಹಾರ್ದಿಕ್ ಪಾಂಡ್ಯ ಪಡೆ ಗಮನಹರಿಸಬಹುದಾಗಿದೆ.
ಪ್ಲೇಆಫ್ ಲೆಕ್ಕಾಚಾರ...
ಆಡಿರುವ ಮೊದಲ 7 ಪಂದ್ಯಗಳಲ್ಲಿ 5ರಲ್ಲಿ ಸೋತು, 2ರಲ್ಲಷ್ಟೇ ಗೆದ್ದಿರುವ ಸನ್ರೈಸರ್ಸ್ಗೆ ಪ್ಲೇಆಫ್ ಹಂತಕ್ಕೇರಲು ಉಳಿದಿರುವ 7 ಪಂದ್ಯಗಳಲ್ಲಿ 6ರಲ್ಲಾದರೂ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ. ಕಳಪೆ ರನ್ರೇಟ್ (-1.217) ಕೂಡ ಹೊಂದಿರುವ ಸನ್ರೈಸರ್ಸ್ ಇನ್ನೊಂದು ಪಂದ್ಯ ಸೋತರೂ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ. ಕೊನೇ 7 ಪಂದ್ಯಗಳಲ್ಲಿ ಎಂಐ, ಸಿಎಸ್ಕೆ, ಜಿಟಿ, ಡಿಸಿ, ಕೆಕೆಆರ್, ಆರ್ಸಿಬಿ ಮತ್ತು ಎಲ್ಎಸ್ಜಿ ಸವಾಲು ಎದುರಿಸಲಿದೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ತಲಾ 4 ಜಯ, ಸೋಲು ಕಂಡಿರುವ ಮುಂಬೈ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇಆಫ್ ಹಂತಕ್ಕೇರಲು ಉಳಿದ 6 ಪಂದ್ಯಗಳಲ್ಲಿ ಮುಂಬೈಗೆ ಕನಿಷ್ಠ 4 ಗೆಲುವಿನ ಅಗತ್ಯವಿದೆ. ಕೊನೇ 6 ಪಂದ್ಯಗಳಲ್ಲಿ ಎಸ್ಆರ್ಎಚ್, ಎಲ್ಎಸ್ಜಿ, ಆರ್ಆರ್, ಜಿಟಿ, ಪಿಬಿಕೆಎಸ್ ಮತ್ತು ಡಿಸಿ ಸವಾಲು ಎದುರಾಗಲಿದೆ. ಈ ಪೈಕಿ ಕೊನೇ 3 ಪಂದ್ಯಗಳು ಅಂಕಪಟ್ಟಿಯ ಅಗ್ರ 4ರೊಳಗಿನ ತಂಡದ ವಿರುದ್ಧ ಆಗಿರುವುದು ಕಠಿಣ ಸವಾಲು ಒಡ್ಡಲಿದೆ.
ಮುಖಾಮುಖಿ: 24
ಸನ್ರೈಸರ್ಸ್: 10
ಮುಂಬೈ: 14
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಕಮ್ಮಿನ್ಸ್ ಮಿನಿ ವಿರಾಮ
ಸನ್ರೈಸರ್ಸ್ ತಂಡ ತನ್ನ ಕೊನೇ ಪಂದ್ಯವನ್ನು ಏ.17ರಂದು ಮುಂಬೈ ವಿರುದ್ಧವೇ ಆಡಿತ್ತು. ನಂತರ ಲಭಿಸಿದ 6 ದಿನಗಳ ವಿರಾಮದ ವೇಳೆ ಸನ್ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಪತ್ನಿ, ಮಕ್ಕಳೊಂದಿಗೆ ಸಿಂಗಾಪುರಕ್ಕೆ ತೆರಳಿ ರಜಾ ದಿನಗಳನ್ನು ಆನಂದಿಸಿ ಬಂದಿದ್ದಾರೆ.