ಚಂಡೀಗಢ: ಮುಲ್ಲನ್ಪುರ್ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 09) ನಡೆದ ಪ್ರಸಕ್ತ ಐಪಿಎಲ್ ಟೂರ್ನಿಯ 23ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 2 ರನ್ಗಳ ರೋಚಕ ಗೆಲುವು ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಎಚ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು. ತಂಡದ ಪರ ನಿತೀಶ್ ರೆಡ್ಡಿ (64 ರನ್, 37 ಎಸೆತ, 4 ಬೌಂಡರಿ, 5 ಸಿಕ್ಸರ್) ಅಮೋಘ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂಜಾಬ್ ಪರ ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರೆ, ರಬಾಡ, ಸ್ಯಾಮ್ ಕರನ್ ಮತ್ತು ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಎಸ್ಆರ್ಎಚ್ ನೀಡಿದ 183 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಮಾತ್ರ ಕಲೆಹಾಕಿತು. ತಂಡದ ಪರ ಶಶಾಂಕ್ ಸಿಂಗ್ (46) ಮತ್ತೆ ಉತ್ತಮ ಆಟವಾಡಿದರು. ಉಳಿದಂತೆ ಸ್ಯಾಮ್ ಕರನ್ (29) ಹಾಗೂ ಶಿಖಂದರ್ ರಜಾ (28) ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.
ಎಸ್ಆರ್ಎಚ್ ಪರ ಉತ್ತಮ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಪ್ಯಾಟ್ ಕಮಿನ್ಸ್, ಟಿ ನಟರಾಜನ್, ನಿತೀಶ್ ರೆಡ್ಡಿ ಹಾಗೂ ಜಯದೇವ್ ಉನದ್ಕಟ್ ತಲಾ ಒಂದೊಂದು ವಿಕೆಟ್ ಪಡೆದರು. (ಏಜೆನ್ಸೀಸ್)