ಕ್ರೀಡೆ

2027 ಏಕದಿನ ವಿಶ್ವಕಪ್: ಕೊಹ್ಲಿ, ರೋಹಿತ್ ಉಪಸ್ಥಿತಿ ಕುರಿತು ಸ್ಫೋಟಕ ಭವಿಷ್ಯ ನುಡಿದ ಗವಾಸ್ಕರ್​ | Kohli & Rohit

Kohli & Rohit: ಟೀಮ್​ ಇಂಡಿಯಾದ ದಿಗ್ಗಜ ಸ್ಟಾರ್​ ಬ್ಯಾಟರ್​, ದಾಖಲೆಗಳ ಸರದಾರ, ರನ್ ಮೆಷಿನ್​ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ಮೇ 12ರಂದು ನಿವೃತ್ತಿ ಘೋಷಿಸಿದರು. ಕೊಹ್ಲಿಯ ಈ ಒಂದು ನಿರ್ಧಾರ ಅಸಂಖ್ಯಾತ ಅಭಿಮಾನಿಗಳಿಗೆ ಅಚ್ಚರಿ ಮಾತ್ರವಲ್ಲದೇ ನೋವಿನ ಸಂಗತಿಯೂ ಆಗಿದೆ. ಐಪಿಎಲ್ 18ನೇ ಆವೃತ್ತಿಯ​ ಮಧ್ಯೆಯೇ ರೋಹಿತ್​ ಶರ್ಮ ಟೆಸ್ಟ್​ಗೆ ನಿವೃತ್ತಿ ಘೋಷಿಸಿದರು. ಅವರ ಬೆನ್ನಲ್ಲೇ ಇದೀಗ ಕೊಹ್ಲಿ ಕೂಡ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿರುವುದು ದಿಗ್ಗಜ ಕ್ರಿಕೆಟಿಗರ ಯುಗಾಂತ್ಯವಾಗಿದೆ.

ಪ್ರಸಕ್ತ ನಡೆಯುತ್ತಿರುವ ಐಪಿಎಲ್​ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿರಾಟ್​ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈಗ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಮುಂದಿರುವುದು ಕೇವಲ ಏಕದಿನ ಫಾರ್ಮೆಟ್​ ಮಾತ್ರ. 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈ ಇಬ್ಬರೂ ದಿಗ್ಗಜರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಎದುರುನೋಡುತ್ತಿದ್ದಾರೆ. ಹೀಗಿರುವಾಗಲೇ ಟೀಮ್ ಇಂಡಿಯಾ ದಿಗ್ಗಜ, ಮಾಜಿ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್​, ಕೊಹ್ಲಿ ಮತ್ತು ರೋಹಿತ್ ಏಕದಿನ ವಿಶ್ವಕಪ್ ಕುರಿತು ಭವಿಷ್ಯ ನುಡಿದಿದ್ದಾರೆ. ​

"ಏಕದಿನ ಫಾರ್ಮೆಟ್​ನಲ್ಲಿ ಇವರಿಬ್ಬರೂ ಅದ್ಭುತ ಇನ್ನಿಂಗ್ಸ್​ ಮತ್ತು ಪ್ರದರ್ಶನ ನೀಡಿದ್ದಾರೆ. ಅದರ ಬಗ್ಗೆ ಅನುಮಾನವೇ ಬೇಡ. ಇಬ್ಬರ ನಿರ್ಧಾರಗಳನ್ನು ನೋಡಿರುವ ಆಯ್ಕೆಗಾರರ ಸಮಿತಿಗೆ ಈಗ 2027ರ ಏಕದಿನ ವಿಶ್ವಕಪ್​ ಟೂರ್ನಿ ಮುಂದಿದೆ. ಯಾವ ಆಟಗಾರರು ಈ ತಂಡದಲ್ಲಿ ಆಡಬೇಕು, ಸ್ಥಾನ ಪಡೆಯಬೇಕು ಎಂಬು ಚಿಂತನೆ ಅವರಿಗಿದೆ. ಈ ಪ್ರಕ್ರಿಯೆ ಸಮಿತಿಯ ಬಹುಮುಖ್ಯ ಭಾಗ. ಅಂತಿಮವಾಗಿ ವಿರಾಟ್​ ಮತ್ತು ರೋಹಿತ್​ 2027ರ ವಿಶ್ವಕಪ್​ನಲ್ಲಿ ಆಡಲು ಸಾಧ್ಯ ಎಂದು ಅವರಿಗೆ ಅನಿಸಿದರೆ ಖಂಡಿತ ಇಬ್ಬರೂ ತಂಡದ ಪರ ಆಡಲಿದ್ದಾರೆ" ಎಂದು ಗವಾಸ್ಕರ್ ಹೇಳಿದರು.

"ಇಲ್ಲ, ನನ್ನ ಪ್ರಕಾರ 2027ರ ವಿಶ್ವಕಪ್ ಸಮಯಕ್ಕೆ ಅವರು ತಂಡದ ಪರ ಆಡುವುದು ಸಾಧ್ಯವಿಲ್ಲ. ಮುಂಬರುವ ವರ್ಷಗಳಲ್ಲಿ ಅವರಿಂದ ಶತಕಗಳ ಆಟ ಹೊರಹೊಮ್ಮಿದರೆ ಆ ದೇವರೇ ಅವರನ್ನು ತಂಡದಿಂದ ದೂರ ತಳ್ಳಲು ಸಾಧ್ಯವಿಲ್ಲ. ಆದರೆ, ನಿರೀಕ್ಷಿಸಿದಂತೆ ಇದೆಲ್ಲವೂ ಅಷ್ಟು ಸುಲಭವಿಲ್ಲ. ಏಕದಿನ ವಿಶ್ವಕಪ್​ ಟೂರ್ನಿ ನಡೆಯುವ ವೇಳೆಗೆ ರೋಹಿತ್​ಗೆ 40 ವರ್ಷ ವಯಸ್ಸಾಗಿದ್ರೆ, ಕೊಹ್ಲಿಗೆ 38 ಆಗಿರುತ್ತೆ. ಹೀಗಿರುವಾಗ ತಂಡದಲ್ಲಿ ಅವರ ಉಪಸ್ಥಿತಿ ಕಷ್ಟಸಾಧ್ಯ. ರೋಹಿತ್ ಫಿಟ್ನೆಸ್​ ಇಲ್ಲಿ ಬಹಳ ಮುಖ್ಯ. ಐಪಿಎಲ್​ನಲ್ಲಿಯೇ ಅವರು ಫೀಲ್ಡಿಂಗ್ ಬಿಟ್ಟು ಕೇವಲ ಬ್ಯಾಟಿಂಗ್ ಮಾತ್ರ ಮಾಡುತ್ತಿದ್ದಾರೆ. ಕೊಹ್ಲಿ ತಮ್ಮ ಸಾಮರ್ಥ್ಯವನ್ನು ಎಂದಿನಂತೆ ಮುಂದಕ್ಕೆ ಕೊಂಡೊಯ್ದಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).