ನವದೆಹಲಿ: ಜರ್ಮನಿಯ ಹೀಲ್ಬ್ರಾನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಭಾನುವಾರವಷ್ಟೇ ಪ್ರಶಸ್ತಿ ಗೆದ್ದ ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಎಟಿಪಿ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ 77ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಗಾಲ್ ಸ್ಪರ್ಧೆ ಬಹುತೇಕ ಖಚಿತವೆನಿಸಿದೆ.
ಸ್ವಿರ್ಜಲೆಂಡ್ನ ಅಲೆಕ್ಸಾಂಡರ್ ರಿಚಾರ್ಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನಗಾಲ್ 6-1, 6-7, 6-3 ಸೆಟ್ಗಳಿಂದ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ 713 ಎಟಿಪಿ ಅಂಕಗಳನ್ನು ಕಲೆಹಾಕಿದರು. ಇದರೊಂದಿಗೆ ನಗಾಲ್ ಎಟಿಪಿ ರ್ಯಾಂಕಿಂಗ್ನಲ್ಲಿ ಬರೋಬ್ಬರಿ 18 ಸ್ಥಾನ ಪ್ರಗತಿ ಕಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಅಗ್ರ 56 ಆಟಗಾರರಿಗೆ ನೇರಅರ್ಹತೆ ಲಭಿಸಲಿದೆ. ಆದರೆ ಒಂದು ದೇಶದಿಂದ ಗರಿಷ್ಠ 4 ಆಟಗಾರರು ಮಾತ್ರ ಆಡಲು ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ವಿಶ್ವ ರ್ಯಾಂಕಿಂಗ್ನಲ್ಲಿ 56ನೇ ಸ್ಥಾನದ ನಂತರದಲ್ಲಿರುವ ಇತರ ಆಟಗಾರರಿಗೂ ಅವಕಾಶ ಲಭಿಸುವ ನಿರೀೆ ಇರುತ್ತದೆ. ಆಯಾ ದೇಶಗಳಿಂದ ಒಲಿಂಪಿಕ್ಸ್ಗೆ ಆಯ್ಕೆಯಾದವರ ಅಂತಿಮ ಪಟ್ಟಿಯನ್ನು ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟ (ಐಟಿಎ್) ಬುಧವಾರ ಪ್ರಕಟಿಸಲಿದೆ. ಬಳಿಕ ಜೂನ್ 19ರಂದು ಆಯಾ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗಳು ಒಲಿಂಪಿಕ್ಸ್ನಲ್ಲಿ ಆಡಲಿರುವ ಆಟಗಾರರ ಹೆಸರನ್ನು ಅಂತಿಮಗೊಳಿಸಲಿವೆ.
ರ್ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್ ಅರ್ಹತೆಗೆ ಸೋಮವಾರ ಅಂತಿಮ ಗಡುವು ಆಗಿದ್ದು, 26 ವರ್ಷದ ನಗಾಲ್ ಈ ಕೊನೇ ಅವಕಾಶದಲ್ಲಿ ಭಾರಿ ಜಿಗಿತ ಕಂಡಿರುವುದು ಲಾಭದಾಯಕವೆನಿಸಿದೆ. 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕೊನೆಯದಾಗಿ ಸೋಮ್ದೇವ್ ದೇವವರ್ಮನ್ ಸಿಂಗಲ್ಸ್ ವಿಭಾಗದಲ್ಲಿ ಆಡಿದ ಭಾರತೀಯರಾಗಿದ್ದಾರೆ.