ನವದೆಹಲಿ: ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಗಿದಿದೆ. ಎರಡೂವರೆ ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಐಪಿಎಲ್ನ 17ನೇ ಸೀಸನ್ ಭಾನುವಾರ (ಮೇ 26) ಮುಕ್ತಾಯಗೊಂಡಿತು. ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ನಂತರ ಕೋಲ್ಕತ್ತ ನೈಟ್ ರೈಡರ್ಸ್ ಈ ಬಾರಿಯ ಚಾಂಪಿಯನ್ ಆಯಿತು. ಐಪಿಎಲ್ ಮುಗಿಯುತ್ತಿದ್ದಂತೆ ಇದೀಗ ಎಲ್ಲರ ಗಮನ ಟಿ20 ವಿಶ್ವಕಪ್ 2024 ನತ್ತ ನೆಟ್ಟಿದೆ.
ಈ ಮೆಗಾ ಟೂರ್ನಮೆಂಟ್ ಜೂನ್ 2ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ವೇದಿಕೆಯಲ್ಲಿ ಪ್ರಾರಂಭವಾಗಲಿದೆ. ಪ್ರಸ್ತುತ ಭಾರತ ತಂಡ ಈ ಟೂರ್ನಿಗಾಗಿ ಅಮೆರಿಕ ತಲುಪಿದೆ. ಜೂನ್ 5ರಂದು ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾ ತನ್ನ ವಿಶ್ವಕಪ್ ಬೇಟೆಯನ್ನು ಪ್ರಾರಂಭಿಸಲಿದೆ. ಅಲ್ಲದೆ, ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಇದೇ ವೇಳೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡ ಮತ್ತು ನೆಚ್ಚಿನ ತಂಡ ಯಾವುದು ಎಂಬುದನ್ನು ದಿಗ್ಗಜ ಕ್ರಿಕೆಟಿಗರೊಬ್ಬರು ನಿರ್ಧರಿಸಿದ್ದಾರೆ.
ಇಂಗ್ಲೆಂಡ್‌ನ ಲೆಜೆಂಡರಿ ಕ್ರಿಕೆಟಿಗ ಇಯಾನ್ ಮಾರ್ಗನ್ ಅವರು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡ ಮತ್ತು ಅವರ ನೆಚ್ಚಿನ ತಂಡದ ಬಗ್ಗೆ ಮಾತನಾಡಿದ್ದಾರೆ. ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಬಹುಶಃ ಮಾರ್ಗನ್ ಅವರ ಮಾತನ್ನು ಒಪ್ಪಬಹುದು. ಮಾರ್ಗನ್ ಪ್ರಕಾರ, ಟಿ20 ವಿಶ್ವಕಪ್‌ನಲ್ಲಿ ಭಾರತವು ಬಲಿಷ್ಠ ತಂಡವಾಗಿದೆ. 15 ಆಟಗಾರರನನ್ನು ಒಳಗೊಂಡ ತಂಡವನ್ನು ನೋಡಿದಾಗ ಭಾರತದ ಬಲಿಷ್ಠತೆ ಎದ್ದು ಕಾಣುತ್ತದೆ. ಅಲ್ಲದೆ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಮಾರ್ಗನ್ ಹೇಳಿದ್ದಾರೆ. ಮಾಜಿ ಕ್ರಿಕೆಟಿಗನಾಗಿ ಮತ್ತು ಇಂಗ್ಲೆಂಡ್‌ಗೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನಾಗಿ ಮಾರ್ಗನ್ ಅವರ ಅನುಭವವನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅವರು ಹೇಳಿದಂತೆ ಟೀಮ್ ಇಂಡಿಯಾ ತುಂಬಾ ಬಲಿಷ್ಠವಾಗಿದೆ.
ರೋಹಿತ್ ಶರ್ಮ ನಾಯಕತ್ವದಲ್ಲಿ ಅಮೆರಿಕಕ್ಕೆ ತೆರಳಿರುವ ಭಾರತ ತಂಡವನ್ನು ಒಮ್ಮೆ ಅವಲೋಕಿಸಿದರೆ, ಆರಂಭಿಕರಾದ ರೋಹಿತ್ ಶರ್ಮ ಮತ್ತು ಯಶಸ್ವಿ ಜೈಸ್ವಾಲ್ ಸದ್ಯಕ್ಕೆ ಉತ್ತಮ ಫಾರ್ಮ್‌ನಲ್ಲಿ ಇಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರರಾಗಿದ್ದಾರೆ. ಇನ್ನೂ ವಿರಾಟ್ ಕೊಹ್ಲಿ ಬಿರುಸಿನ ಫಾರ್ಮ್‌ನಲ್ಲಿದ್ದಾರೆ. ಅಲ್ಲದೆ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರಾ ಜಡೇಜಾ ಮಧ್ಯದಲ್ಲಿ ಮಿಂಚಲಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಅನ್ನು ತಡೆಯುವ ಬೌಲಿಂಗ್ ಲೈನ್ ಅಪ್ ಯಾವ ತಂಡದಲ್ಲೂ ಸದ್ಯಕ್ಕೆ ಇಲ್ಲ.
ಇನ್ನೂ ಬೌಲಿಂಗ್ ವಿಚಾರಕ್ಕೆ ಬಂದರೆ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಪ್ರಮುಖ ಶಕ್ತಿಯಾಗಿದ್ದಾರೆ. ಹಾಗೆಯೇ ಸ್ಪಿನ್‌ನಲ್ಲಿ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬುಮ್ರಾ ಜೊತೆಗೆ ಸಿರಾಜ್ ಮತ್ತು ಅರ್ಷದೀಪ್ ಕೂಡ ತಮ್ಮ ಲೆವೆಲ್ ಕಡಿಮೆಯಾಗದಂತೆ ಬೌಲಿಂಗ್ ಮಾಡಿದರೆ. ಒಟ್ಟಾರೆ ಮಾರ್ಗನ್ ಪ್ರಕಾರ ಟೀಂ ಇಂಡಿಯಾ ಟೂರ್ನಿಯಲ್ಲಿ ಹಾಟ್ ಫೇವರಿಟ್ ಆಗಿ ಮುಂದುವರಿಯುವುದು ಖಚಿತವಾಗಿದೆ. (ಏಜೆನ್ಸೀಸ್)