Steve Smith : ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್ಗೆ ದಿಢೀರನೇ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತ ಬೆನ್ನಲ್ಲೇ ಸ್ಮಿತ್ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಅಂದಹಾಗೆ 35 ವರ್ಷದ ಸ್ಮಿತ್, ಏಕದಿನ ಸ್ವರೂಪಕ್ಕೆ ಮಾತ್ರ ವಿದಾಯ ಹೇಳಿದ್ದು, ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಮುಂದುವರಿಯಲಿದ್ದಾರೆ.
ಸ್ಮಿತ್ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಮೊದಲು ಟೀಮ್ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿಗೆ ತಿಳಿಸಿದ್ದಾರೆಂದು ತೋರುತ್ತದೆ. ಏಕೆಂದರೆ, ಸೆಮಿಫೈನಲ್‌ನಲ್ಲಿ ಆಸೀಸ್ ವಿರುದ್ಧ ಭಾರತ ತಂಡ ಜಯಗಳಿಸಿದ ನಂತರ ಸ್ಮಿತ್ ಮತ್ತು ಕೊಹ್ಲಿ ಮುಖಾಮುಖಿಯಾಗಿ ಕೈಕುಲುಕಿದರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇದು ಕೊನೆಯ ಪಂದ್ಯವೇ? ಎಂದು ಕೊಹ್ಲಿ ಕೇಳಿದಾಗ ಸ್ಮಿತ್ ಅವರು ಹೌದು ಎಂದು ಉತ್ತರಿಸಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ಅಲ್ಲದೆ, ಸ್ಮಿತ್ ಹೌದು ಎಂದಾಗ ಕೊಹ್ಲಿಯ ಮುಖದ ಭಾವ ಬದಲಾಗಿ ಸ್ಮಿತ್ ಅವರನ್ನು ತಬ್ಬಿಕೊಳ್ಳುತ್ತಾರೆ. ಹೀಗಾಗಿ ಸ್ಮಿತ್ ಅವರು ಅಧಿಕೃತವಾಗಿ ಘೋಷಣೆ ಮಾಡುವ ಮುನ್ನವೇ ಅವರು ವಿದಾಯ ಹೇಳುವುದು ಕೊಹ್ಲಿಗೆ ತಿಳಿದಿತ್ತು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಮೈದಾನದಲ್ಲಿ ಎದುರಾಳಿಗಳಾಗಿದ್ದರೂ ಕೊಹ್ಲಿ ಮತ್ತು ಸ್ಮಿತ್ ನಡುವಿನ ವೈಯಕ್ತಿಕ ಸ್ನೇಹಕ್ಕೆ ಇದು ಪುರಾವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕ್ರೀಡಾ ಮನೋಭಾವವನ್ನು ತೋರಿಸುವುದರಲ್ಲಿ ಕೊಹ್ಲಿ ಅವರನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಹೊಸ ತಲೆಮಾರಿನ ಫ್ಯಾಬ್ ಫೋರ್‌ನಲ್ಲಿ (ಕೊಹ್ಲಿ, ವಿಲಿಯಮ್ಸನ್, ಸ್ಮಿತ್, ರೂಟ್) ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಹೆಸರುಗಳು ಪ್ರಮುಖವಾಗಿವೆ. ಮೈದಾನದಲ್ಲಿ ಪರಸ್ಪರ ಪೈಪೋಟಿ ನಡೆಸುವ ಈ ಇಬ್ಬರೂ ಒಬ್ಬರನ್ನೊಬ್ಬರು ಮೊದಲು ಹೊಗಳುತ್ತಾರೆ. ಕೊಹ್ಲಿಯಂತಹ ಶ್ರೇಷ್ಠ ಆಟಗಾರನನ್ನು ತಾನು ನೋಡಿಲ್ಲ ಎಂದು ಸ್ಮಿತ್ ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.
2019ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಮಯದಲ್ಲಿ, ಪ್ರೇಕ್ಷಕರು ಸ್ಮಿತ್ ಅವರನ್ನು 'ಮೋಸಗಾರ' ಎಂದು ಅಪಹಾಸ್ಯ ಮಾಡಿದಾಗ, ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಬೌಂಡರಿಗೆ ಬಂದು ಅವರನ್ನು ಹಾಗೆ ಮಾಡದಂತೆ ತಡೆದರು. ಇದಲ್ಲದೆ, ಅವರು ಸ್ಮಿತ್ ಅವರ ಭುಜದ ಮೇಲೆ ಕೈಯಿಟ್ಟು ಬೆಂಬಲ ವ್ಯಕ್ತಪಡಿಸಿದರು. ಇದರೊಂದಿಗೆ, ಪ್ರೇಕ್ಷಕರು ಸಹ ಸಂಯಮವನ್ನು ಕಾಯ್ದುಕೊಂಡರು.
ಇನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದ ಬಳಲಿದ ಕಾರಣ ಸ್ಮಿತ್ ಅವರಿಗೆ ನಾಯಕತ್ವದ ಜವಬ್ದಾರಿ ನೀಡಲಾಯಿತು. 2010ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಸ್ಮಿತ್, ತಮ್ಮ ವೃತ್ತಿಜೀವನದಲ್ಲಿ 170 ಪಂದ್ಯಗಳನ್ನು ಆಡಿದ್ದಾರೆ. 12 ಶತಕಗಳು ಮತ್ತು 35 ಅರ್ಧಶತಕಗಳು ಸೇರಿದಂತೆ 43.28 ಸರಾಸರಿಯಲ್ಲಿ 5,800 ರನ್ ಗಳಿಸಿದ್ದಾರೆ.
2015 ಮತ್ತು 2023ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಪ್ರಮುಖ ಸದಸ್ಯ ಸ್ಮಿತ್. ಬೌಲಿಂಗ್ ಕೂಡ ಮಾಡುವ ಸ್ಮಿತ್, 28 ವಿಕೆಟ್ ಕಬಳಿಸಿದ್ದಾರೆ. ಲೆಗ್ ಸ್ಪಿನ್ನರ್ ಆಗಿ ತಂಡಕ್ಕೆ ಬಂದ ಸ್ಟೀವ್ ಸ್ಮಿತ್, ನಿಧಾನವಾಗಿ ಆಲ್ ರೌಂಡರ್ ಆದರು. ನಂತರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆದರು ಮತ್ತು ಅಲ್ಲಿಂದ ಅವರು ಸ್ಟಾರ್ ಆಟಗಾರನಾಗಿ ಬೆಳೆದರು. ಇದೊಂದು ಉತ್ತಮ ಪ್ರಯಾಣ. ನಾನು ಪ್ರತಿ ನಿಮಿಷವನ್ನು ಆನಂದಿಸಿದ್ದೇನೆ. ಈ ಸ್ವರೂಪದಲ್ಲಿ ಹಲವು ಅದ್ಭುತ ನೆನಪುಗಳಿವೆ. ಎರಡು ವಿಶ್ವಕಪ್ ಗೆದ್ದದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಅನೇಕ ಉತ್ತಮ ಆಟಗಾರರೊಂದಿಗೆ ಆಡಿದ್ದೇನೆ ಎಂದು ಸ್ಮಿತ್ ಹೇಳಿದ್ದಾರೆ.
2027ರ ಏಕದಿನ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಲು ತಂಡದ ನಿರ್ವಹಣೆಗೆ ಸಾಕಷ್ಟು ಸಮಯ ನೀಡುವ ಉದ್ದೇಶದಿಂದ ಅವರು ಏಕದಿನ ಪಂದ್ಯಗಳನ್ನು ತ್ಯಜಿಸುತ್ತಿರುವುದಾಗಿ ಬಹಿರಂಗಪಡಿಸಿದರು. ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಆದಾಗ್ಯೂ, ಎರಡು ವರ್ಷಗಳಲ್ಲಿ ಏಕದಿನ ವಿಶ್ವಕಪ್ ಬರಲಿದ್ದು, ತಂಡವನ್ನು ಸಿದ್ಧಪಡಿಸಲು ನಿರ್ವಹಣೆಗೆ ಸಮಯವಿರುತ್ತದೆ. ಟೆಸ್ಟ್ ಮತ್ತು ಟಿ20 ಗಳಲ್ಲಿ ಅವಕಾಶ ನೀಡಿದರೆ, ನಾನು ಖಂಡಿತವಾಗಿಯೂ ತಂಡದ ಯಶಸ್ಸಿಗೆ ಕೆಲಸ ಮಾಡುತ್ತೇನೆ ಎಂದು ಸ್ಮಿತ್ ಹೇಳಿದರು. (ಏಜೆನ್ಸೀಸ್)