ನವದೆಹಲಿ: ಇದೇ ಜು.27ರಿಂದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಆರು ಪಂದ್ಯಗಳ ಏಕದಿನ ಸರಣಿಗೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಗೆಲ್ಲುವ ಮುನ್ನೋಟದಲ್ಲಿ ಸದ್ಯ ಭರ್ಜರಿ ತಯಾರಿ ನಡೆಸುತ್ತಿರುವ ಶ್ರೀಲಂಕಾ ಪಡೆಗೆ ಸ್ಟಾರ್ ಆಟಗಾರರೇ ಗೆಲುವಿನ ಮಂತ್ರವಾಗಿದ್ದಾರೆ. ತಂಡದಲ್ಲಿ ಅತ್ಯುತ್ತಮ ವೇಗಿ ಎಂದೇ ಖ್ಯಾತಿ ಪಡೆದಿರುವ ದುಷ್ಮಂತ ಚಮೀರ ಇದೀಗ ಟಿ20 ಸರಣಿಯಿಂದ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ.
ಟಿ20 ಸರಣಿ ಪ್ರಾರಂಭಕ್ಕೂ ಮೊದಲೇ ಇಂಜುರಿಗೆ ಒಳಗಾದ ಸ್ಟಾರ್ ವೇಗಿ ಚಮೀರ, ಇದೀಗ ಸಿರೀಸ್ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಈ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಇಂದು ಅಧಿಕೃತವಾಗಿ ತಿಳಿಸಿದ್ದು, ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಚಮೀರ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಸದ್ಯದ ಮಟ್ಟಿಗೆ ಅವರಿಗೆ ಚಿಕಿತ್ಸೆ ಹಾಗೂ ವಿಶ್ರಾಂತಿ ಅಗತ್ಯವಿರುವ ಕಾರಣ ಭಾರತ ವಿರುದ್ಧದ ಸರಣಿಯಿಂದ ಕೈಬಿಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಲಂಕಾ ಕ್ರಿಕೆಟ್ನ ಮುಖ್ಯ ಆಯ್ಕೆಗಾರ ಉಪುಲ್ ತರಂಗಾ, "ಚಮೀರ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ಮುಂದಿನ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಈ ಸಮಯದಲ್ಲಿ ದುಷ್ಮಂತ ಆರೋಗ್ಯ ನಮಗೆ ಮುಖ್ಯ. ನಿನ್ನೆ ವೈದ್ಯರು ನೀಡಿದ ರಿಪೋರ್ಟ್ಸ್ಗಳು ನಮ್ಮ ಕೈಸೇರಿದ ಕಾರಣ ಇಂದು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಚಮೀರ ಸ್ಥಾನಕ್ಕೆ ಅಸಿತ ಫೆರ್ನಾಂಡೋ ಅವರನ್ನು ಆಡಿಸಲಿದ್ದೇವೆ" ಎಂದು ತಿಳಿಸಿದರು,(ಏಜೆನ್ಸೀಸ್).