ಕ್ರೀಡೆ

ವರ್ಷದ ಮೊದಲ ಗ್ರಾಂಡ್​ ಸ್ಲಾಂಗೆ ವೇದಿಕೆ ಸಜ್ಜು; ಇಂದಿನಿಂದ ಆಸ್ಟ್ರೆಲಿಯನ್​ ಓಪನ್​ ಟೆನಿಸ್

ಮೆಲ್ಬೋರ್ನ್​: ಹೊಸ ವರ್ಷದ ಮೊದಲ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿಗೆ ವೇದಿಕೆ ಸಜ್ಜಾಗಿದ್ದು, ಭಾನುವಾರದಿಂದ ಮೆಲ್ಬೋರ್ನ್​ ಪಾರ್ಕ್​ನಲ್ಲಿ ಆಸ್ಟ್ರೆಲಿಯನ್​ ಓಪನ್​ ಕಿರೀಟಕ್ಕಾಗಿ ಹೋರಾಟ ನಡೆಯಲಿದೆ. ವಿಶ್ವ ನಂ. 1 ತಾರೆಯರಾದ ಇಟಲಿಯ ಜನ್ನಿಕ್​ ಸಿನ್ನರ್​ ಮತ್ತು ಬೆಲಾರಸ್​ನ ಅರಿನಾ ಸಬಲೆಂಕಾ ಈ ಬಾರಿ ಹಾಲಿ ಚಾಂಪಿಯನ್​ಗಳಾಗಿ ಕಣಕ್ಕಿಳಿಯಲಿದ್ದಾರೆ. 10 ಬಾರಿಯ ಚಾಂಪಿಯನ್​ ನೊವಾಕ್​ ಜೋಕೊವಿಕ್​ 25ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲುವಿನ ಹಂಬಲದಲ್ಲಿದ್ದಾರೆ. ಸ್ಪೇನ್​ ದಿಗ್ಗಜ ರಾಫೆಲ್​​ ನಡಾಲ್​ ನಿವೃತ್ತಿಯ ನಂತರ ನಡೆಯುತ್ತಿರುವ ಮೊದಲ ಗ್ರಾಂಡ್​ ಸ್ಲಾಂ ಇದಾಗಿದೆ.

ಡೋಪ್​ ಪ್ರಕರಣ ಮರೆಯಲು ಸಿನ್ನರ್​, ಸ್ವಿಯಾಟೆಕ್​ ಪ್ರಯತ್ನ: ಕಳೆದ ವರ್ಷ ವಿಚಿತ್ರವಾದ ಡೋಪಿಂಗ್​ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೂ, ದೊಡ್ಡ ಶಿಕ್ಷೆ ಅಥವಾ ಹೆಚ್ಚಿನ ಅವಧಿಯ ನಿಷೇಧದಿಂದ ಪಾರಾಗಿದ್ದ ವಿಶ್ವ ನಂ. 1 ತಾರೆಯರಾದ ಜನ್ನಿಕ್​ ಸಿನ್ನರ್​ ಮತ್ತು ಇಗಾ ಸ್ವಿಯಾಟೆಕ್​ ಇದೀಗ ಅದನ್ನು ಬದಿಗೊತ್ತಿ ಹೊಸ ಆರಂಭವನ್ನು ಬಯಸಿದ್ದಾರೆ. ಜತೆಗೆ ಡೋಪಿಂಗ್​ ಬಗ್ಗೆ ಹಿಂದಿಗಿಂತ ಹೆಚ್ಚು ಜಾಗೃತರಾಗಿದ್ದಾರೆ.

ಜೋಕೋಗೆ ಮಾಜಿ ಎದುರಾಳಿ ಕೋಚ್​!

ಮಾಜಿ ಎದುರಾಳಿ ಹಾಗೂ ಹೊಸ ಕೋಚ್​ ಆಂಡಿ ಮರ್ರೆ ಜತೆಗೆ ಜೋಕೋಗೆ ಇದು ಮೊದಲ ಟೂರ್ನಿ ಎನಿಸಿದೆ. ಹೀಗಾಗಿ ಈ ಜೋಡಿಯ ಯಶಸ್ಸಿನ ಬಗ್ಗೆಯೂ ಟೆನಿಸ್​ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿದೆ. ಸೆರ್ಬಿಯಾ ತಾರೆ ಜೋಕೋ ಮೊದಲ ಸುತ್ತಿನಲ್ಲಿ, ಟೂರ್ನಿಗೆ ವೈಲ್ಡ್​ಕಾರ್ಡ್​ ಪ್ರವೇಶ ಪಡೆದಿರುವ ಭಾರತದ ಆಂಧ್ರ ಮೂಲದ ಅಮೆರಿಕ ಯುವ ಆಟಗಾರ ನಿಶೇಶ್​ ಬಸವರೆಡ್ಡಿ ಅವರ ಸುಲಭ ಸವಾಲು ಎದುರಿಸಲಿದ್ದಾರೆ. 2024ರಲ್ಲಿ ಒಲಿಂಪಿಕ್ಸ್​ ಸ್ವರ್ಣ ಪದಕದ ಕನಸು ನನಸಾಗಿಸಿಕೊಂಡಿದ್ದರೂ, ಒಂದೂ ಗ್ರಾಂಡ್​ ಸ್ಲಾಂ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ವಿಲರಾಗಿದ್ದ 37 ವರ್ಷದ ಜೋಕೋ, 2023ರ ಬಳಿಕ ಮತ್ತೊಮ್ಮೆ ಮೆಲ್ಬೋರ್ನ್​ನಲ್ಲಿ ಚಾಂಪಿಯನ್​ ಪಟ್ಟವೇರುವ ತವಕದಲ್ಲಿದ್ದಾರೆ.

ಅಲ್ಕರಾಜ್​ಗೆ ಕ್ಯಾರಿಯರ್​ ಸ್ಲಾಂ ಅವಕಾಶ

ಈಗಾಗಲೆ ಇತರ 3 ಗ್ರಾಂಡ್​ ಸ್ಲಾಂಗಳನ್ನು ಗೆದ್ದುಕೊಂಡಿರುವ ಸ್ಪೇನ್​ ಯುವತಾರೆ ಮತ್ತು ವಿಶ್ವ ನಂ. 3 ಕಾಲೋರ್ಸ್​ ಅಲ್ಕರಾಜ್​, ಆಸ್ಟ್ರೆಲಿಯನ್​ ಓಪನ್​ನಲ್ಲಿ ಗೆದ್ದರೆ ಕ್ಯಾರಿಯರ್​ ಸ್ಲಾಂ ಸಾಧಿಸಲಿದ್ದಾರೆ. 4 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡೆಯ 21 ವರ್ಷದ ಅಲ್ಕರಾಜ್​, ಕಳೆದ ವರ್ಷ ಕ್ವಾರ್ಟರ್​ಫೈನಲ್​ಗೇರಿದ್ದೇ ಮೆಲ್ಬೋರ್ನ್​ನಲ್ಲಿ ಅವರ ಅತ್ಯುತ್ತಮ ನಿರ್ವಹಣೆ ಎನಿಸಿದೆ.

ಹ್ಯಾಟ್ರಿಕ್​ ತವಕದಲ್ಲಿ ಸಬಲೆಂಕಾ

ಕಳೆದ 2 ಆವೃತ್ತಿಯ ಚಾಂಪಿಯನ್​ ಆಗಿರುವ ಬೆಲಾರಸ್​ ತಾರೆ ಅರಿನಾ ಸಬಲೆಂಕಾ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಈ ಬಾರಿ ಹ್ಯಾಟ್ರಿಕ್​ ಸಾಧಿಸುವ ತವಕದಲ್ಲಿದ್ದಾರೆ. ಮಾರ್ಟಿನಾ ಹಿಂಗಿಸ್​ (1997&99) ಬಳಿಕ ಯಾರೂ ಈ ಸಾಧನೆ ಮಾಡಿಲ್ಲ. ಆದರೆ ಅಗ್ರ ಶ್ರೇಯಾಂಕಿತೆ ಸಬಲೆಂಕಾ ಈ ಬಾರಿ ಸ್ವಲ್ಪ ಕಠಿಣ ಡ್ರಾ ಪಡೆದಿದ್ದು, ಮೊದಲ ಸುತ್ತಿನಲ್ಲೇ 2017ರ ಯುಎಸ್​ ಓಪನ್​ ಚಾಂಪಿಯನ್​ ಅಮೆರಿಕದ ಸ್ಲೋವನ್​ ಸ್ಟೀಪಲ್ಸ್​ ವಿರುದ್ಧ ಆಡಲಿದ್ದಾರೆ. 3ನೇ ಶ್ರೇಯಾಂಕಿತೆ ಕೋಕೋ ಗೌಫ್​ , ಸಬಲೆಂಕಾಗೆ ಸೆಮೀಸ್​ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ವಿಶ್ವ ನಂ. 2 ಇಗಾ ಸ್ವಿಯಾಟೆಕ್​, 4ನೇ ಶ್ರೇಯಾಂಕಿತೆ ಇಟಲಿಯ ಜಾಸ್ಮಿನ್​ ಪಾವೊಲಿನಿ ಮತ್ತು 6ನೇ ಶ್ರೇಯಾಂಕಿತೆ ಎಲೆನಾ ರೈಬಕಿನಾ ಡ್ರಾದ ಇನ್ನೊಂದು ಭಾಗದಲ್ಲಿದ್ದಾರೆ.

ನಗಾಲ್​ಗೆ ಮಚಾಕ್​ ಎದುರಾಳಿ

ಭಾರತದ ಅಗ್ರ ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಈ ಬಾರಿ ಪ್ರಧಾನ ಸುತ್ತಿಗೆ ನೇರಅರ್ಹತೆ ಗಳಿಸಿದ್ದು, ಜೆಕ್​ ಗಣರಾಜ್ಯದ ಥಾಮಸ್​ ಮಚಾಕ್​ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. 27 ವರ್ಷದ ನಗಾಲ್​ ಎಟಪಿ ವಿಶ್ವ ರ್ಯಾಂಕಿಂಗ್​ನಲ್ಲಿ ಪ್ರಸಕ್ತ 96ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಅಗ್ರ 104 ರ್ಯಾಂಕ್​ನ ಆಟಗಾರರಿಗೆ ವರ್ಷದ ಮೊದಲ ಗ್ರಾಂಡ್​ ಸ್ಲಾಂಗೆ ನೇರಪ್ರವೇಶ ನೀಡಲಾಗಿದೆ. ನಗಾಲ್​ ಕಳೆದ ವರ್ಷ ಟೂರ್ನಿಯ 2ನೇ ಸುತ್ತಿಗೇರಿದ್ದರು. ನಗಾಲ್​ ಈ ಬಾರಿ 3ನೇ ಸುತ್ತಿಗೇರಿದರೆ ಜೋಕೊವಿಕ್​ ಎದುರಾಗಲಿದ್ದಾರೆ.

*100: ನೊವಾಕ್​ ಜೋಕೊವಿಕ್​ ಗೆದ್ದರೆ 25ನೇ ಗ್ರಾಂಡ್​ ಸ್ಲಾಂನೊಂದಿಗೆ 100ನೇ ಎಟಿಪಿ ಟೂರ್​ ಪ್ರಶಸ್ತಿ ಗೆದ್ದ ಸಾಧನೆಯನ್ನೂ ಮಾಡಲಿದ್ದಾರೆ. ಜಿಮ್ಮಿ ಕಾನರ್ಸ್​ (109) ಮತ್ತು ರೋಜರ್​ ಫೆಡರರ್​ (103) ಈ ಸಾಧನೆ ಮಾಡಿರುವ ಮೊದಲಿಬ್ಬರಾಗಿದ್ದಾರೆ.

*511: ಟೂರ್ನಿಯ ಒಟ್ಟು ಬಹುಮಾನ 511 ಕೋಟಿ ರೂ. ಆಗಿದೆ. ಇದು ಕಳೆದ ಆವೃತ್ತಿಗಿಂತ ಶೇ. 12 ಅಧಿಕವಾಗಿದೆ. ಪುರುಷ&ಮಹಿಳಾ ಸಿಂಗಲ್ಸ್​ ವಿಭಾಗದ ವಿಜೇತರು ತಲಾ 18.52 ಕೋಟಿ ರೂ. ಗಳಿಸಲಿದ್ದಾರೆ.

*25: ಜೋಕೊವಿಕ್​ ಪ್ರಶಸ್ತಿ ಗೆದ್ದರೆ 25 ಗ್ರಾಂಡ್​ ಸ್ಲಾಂ ಗೆದ್ದ ವಿಶ್ವದ ಮೊದಲ ಸಾಧಕ ಎನಿಸಲಿದ್ದಾರೆ. ಪ್ರಸಕ್ತ ಅವರು ಮಾರ್ಗರೇಟ್​ ಕೋರ್ಟ್​ ಜತೆಗೆ 24 ಗ್ರಾಂಡ್​ ಸ್ಲಾಂ ಗೆಲುವಿನ ಸಮಬಲದಲ್ಲಿದ್ದಾರೆ.

*ಆರಂಭ: ಬೆಳಗ್ಗೆ 5.30

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​, ಸೋನಿ ಲೈವ್​ (ಒಟಿಟಿ).