ಕ್ರೀಡೆ

ಶ್ರೀಲಂಕಾ ಎದುರು 33 ರನ್​ಗಳಿಂದ ಗೆಲುವು ದಾಖಲಿಸಿದ ಬಾಂಗ್ಲಾದೇಶ

ಢಾಕಾ: ಮುಶ್ಫಿಕರ್​ ರಹೀಮ್​ (84ರನ್​, 87ಎಸೆತ, 4 ಬೌಂಡರಿ, 1 ಸಿಕ್ಸರ್​) ಸಮಯೋಚಿತ ಬ್ಯಾಟಿಂಗ್​ ಹಾಗೂ ಮುಸ್ತಾಫಿಜರ್​ ರೆಹಮಾನ್​ ( 34ಕ್ಕೆ 3) ಮಾರಕ ದಾಳಿ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ತಂಡ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 33 ರನ್​ಗಳಿಂದ ಸೋಲಿಸಿತು. ಏಕದಿನ ವಿಶ್ವಕಪ್​ ಸೂಪರ್​ ಲೀಗ್​ ಅಂಗವಾಗಿ ನಡೆಯುತ್ತಿರುವ 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾ ತಂಡ 1-0 ಯಿಂದ ಮುನ್ನಡೆ ಸಾಧಿಸಿತು. ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ತಂಡ 6 ವಿಕೆಟ್​ಗೆ 257 ರನ್​ ಪೇರಿಸಿದರೆ, ಪ್ರತಿಯಾಗಿ ಆರಂಭಿಕ ಆಘಾತ ಅನುಭವಿಸಿದ ಪ್ರವಾಸಿ ಲಂಕಾ ತಂಡ, ವನಿಂದು ಹಸರಂಗ (74ರನ್​, 60 ಎಸೆತ, 3 ಬೌಂಡರಿ, 5 ಸಿಕ್ಸರ್​) ಕಡೇ ಹಂತದಲ್ಲಿ ಹೋರಾಟದ ನಡುವೆಯೂ 48.1 ಓವರ್​ಗಳಲ್ಲಿ 224 ರನ್​ಗಳಿಗೆ ಸರ್ವಪತನ ಕಂಡಿತು. 2ನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ.

ಬಾಂಗ್ಲಾದೇಶ: 6 ವಿಕೆಟ್​ಗೆ 257 (ತಮೀಮ್​ ಇಕ್ಬಾಲ್​ 52, ಮುಶ್ಫಿಕರ್​ ರಹೀಮ್​ 84, ವೊಹಮದುಲ್ಲಾ 27, ಧನಂಜಯ್​ ಡಿ ಸಿಲ್ವಾ 45ಕ್ಕೆ 3), ಶ್ರೀಲಂಕಾ: 48.1 ಓವರ್​ಗಳಲ್ಲಿ 224 (ವನಿಂದು ಹಸರಂಗ 74, ಇಸುರು ಉದಾನ 21, ಕುಶಾಲ್​ ಪೆರೇರಾ 30, ಮೆಹಿದಿ ಹಸನ್​ 30ಕ್ಕೆ 4, ಮುಸ್ತಾಫಿಜರ್​ ರೆಹಮಾನ್​ 34ಕ್ಕೆ 3, ಮೊಹಮದ್​ ಸೈಫಿದ್ದೀನ್​ 49ಕ್ಕೆ 2).

- ಶ್ರೀಲಂಕಾ ತಂಡಕ್ಕೆ ಕಾಡಿದ ಕೋವಿಡ್​

ಢಾಕಾ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕೇವಲ ಒಂದು ಗಂಟೆ ಬಾಕಿ ಇರುವಾಗಲೇ ಕೋವಿಡ್​&19 ಮಹಾಮಾರಿ ಕಾಡಿತು. ಭಾನುವಾರ ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡದ ಮೂವರಿಗೆ ಕೋವಿಡ್​-19 ಕಾಣಿಸಿಕೊಂಡಿತು. ಬೌಲಿಂಗ್​ ಕೋಚ್​ ಚಮಿಂದಾ ವಾಸ್​ ಹಾಗೂ ಇಬ್ಬರು ಆಟಗಾರರಿಗೆ ಸೋಂಕು ತಲುಗಿದೆ ಎನ್ನಲಾಗಿದೆ.