ಕ್ರೀಡೆ

ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನಲ್ಲಿ ಕರ್ನಾಟಕಕ್ಕೆ ಮತ್ತೆ 3 ಚಿನ್ನ, 4 ರಜತ; ಒಲಿಂಪಿಯನ್​ ಶ್ರೀಹರಿಗೆ ಸ್ವರ್ಣ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಆತಿಥೇಯ ಕರ್ನಾಟಕದ ಈಜುಪಟುಗಳು 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್​ಷಿಪ್​ನ ಎರಡನೇ ದಿನ ಮತ್ತೆ 3 ಚಿನ್ನ, 4 ಬೆಳ್ಳಿ, 1 ಕಂಚಿನ ಸಹಿತ 8 ಪದಕಗಳನ್ನು ಗೆದ್ದು ಪ್ರಾಬಲ್ಯ ಮುಂದುವರಿಸಿದ್ದಾರೆ. ಒಲಿಂಪಿಯನ್​ ಶ್ರೀಹರಿ ನಟರಾಜ್​, ಅನೀಶ್​ ಎಸ್​. ಗೌಡ ಮತ್ತು ವಿದಿತ್​ ಎಸ್​. ಶಂಕರ್​ ಬುಧವಾರ ಕರ್ನಾಟಕಕ್ಕೆ ಸ್ವರ್ಣ ಪದಕ ಗೆದ್ದುಕೊಟ್ಟರು. ಇದರೊಂದಿಗೆ ರಾಜ್ಯ ತಂಡ ಕೂಟದ ಮೊದಲೆರಡು ದಿನಗಳಲ್ಲಿ 9 ಚಿನ್ನ, 7 ಬೆಳ್ಳಿ, 1 ಕಂಚಿನ ಸಹಿತ ಒಟ್ಟು 17 ಪದಕಗಳನ್ನು ಗೆದ್ದುಕೊಂಡಂತಾಗಿದೆ. ಕರ್ನಾಟಕ ಕೂಟದ ಮೊದಲ ದಿನವೇ 6 ಸ್ವರ್ಣ ಪದಕ ಜಯಿಸಿ ಬೀಗಿತ್ತು.

ಮಂಗಳೂರಿನ ಎಮ್ಮೆಕೆರೆಯ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆಯುತ್ತಿರುವ ಕೂಟದಲ್ಲಿ ಶ್ರೀಹರಿ ನಟರಾಜ್​ ಪುರುಷರ 100 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ 50.59 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನ ಒಲಿಸಿಕೊಂಡರು. ಅನೀಶ್​ ಎಸ್​. ಗೌಡ ಪುರುಷರ 800 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ 8 ನಿಮಿಷ, 20.01 ಸೆಕೆಂಡ್​ಗಳಲ್ಲಿ ಈಜಿ ಚಿನ್ನಕ್ಕೆ ಮುತ್ತಿಟ್ಟರೆ, ರಾಜ್ಯದ ಮತ್ತೋರ್ವ ಸ್ಪರ್ಧಿ ದರ್ಶನ್​ ಎಸ್​. (8ನಿ, 27.69 ಸೆ) ಬೆಳ್ಳಿ ಪದಕ ಜಯಿಸಿದರು. ವಿದಿತ್​ ಎಸ್​. ಶಂಕರ್​ ಪುರುಷರ 50 ಮೀ. ಬ್ರೆಸ್ಟ್​ಸ್ಟ್ರೊಕ್​ ವಿಭಾಗದಲ್ಲಿ 28.62 ಸೆಕೆಂಡ್​ಗಳಲ್ಲಿ ಈಜಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ರಾಜ್ಯದ ಶಿವ ಸುಂದರ್​ ಪುರುಷರ 200 ಮೀ. ಮೆಡ್ಲೆಯಲ್ಲಿ 2 ನಿಮಿಷ, 7.73 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ರಜತ ಪದಕ ಗೆದ್ದುಕೊಂಡರು.

ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ದಿನ 2 ಬೆಳ್ಳಿ, 1 ಕಂಚು ಒಲಿಯಿತು. 1,500 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ ಶಿರಿನ್​ 17 ನಿಮಿಷ, 50.61 ಸೆಕೆಂಡ್​ಗಳಲ್ಲಿ ಈಜಿ ಬೆಳ್ಳಿ ಒಲಿಸಿಕೊಂಡರು. ಮೊದಲ ದಿನ ರಾಷ್ಟ್ರೀಯ ದಾಖಲೆ ನಿರ್ಮಿಸಿ ಗಮನಸೆಳೆದಿದ್ದ ರಾಜ್ಯದ ಹಷಿಕಾ ರಾಮಚಂದ್ರ 2ನೇ ದಿನ 200 ಮೀ. ಮೆಡ್ಲೆ ವಿಭಾಗದಲ್ಲಿ 2 ನಿಮಿಷ, 25. 84 ಸೆಕೆಂಡ್​ಗಳಲ್ಲಿ ಈಜಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಈ ಸ್ಪರ್ಧೆಯಲ್ಲಿ ರಾಜ್ಯದ ಮತ್ತೋರ್ವ ಈಜುಪಟು ಮಾನವಿ ವರ್ಮ (2ನಿ, 26.81 ಸೆ) ಕಂಚಿನ ಪದಕ ಜಯಿಸಿದರು.

ಶ್ರೀಹರಿ ನಟರಾಜ್​ ಜತೆಗೆ ಕಾರ್ತಿಕೇಯನ್​ ನಾಯರ್​, ಶಿರಿನ್​, ಶಾಲಿನಿ ಆರ್​. ದೀತ್​ ಒಳಗೊಂಡ ರಾಜ್ಯ ತಂಡ ಮಿಶ್ರ 4/400 ಮೀ. ಫ್ರೀಸ್ಟೆ$ಲ್​ ರಿಲೇ ಸ್ಪರ್ಧೆಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕ ವಂಚಿತವಾಯಿತು. ಈ ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ರೈಲ್ವೇಸ್​ಗೆ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು ಲಭಿಸಿತು.

ತಮಿಳುನಾಡು ತಂಡ ದಾಖಲೆ

ತಮಿಳುನಾಡು ತಂಡ ಮಿಶ್ರ 4/100 ಮೀ. ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆ ಬರೆಯಿತು. ಪ್ರಮಿತಿ ಜ್ಞಾನಶೇಖರನ್​, ಧನುಷ್​ ಸುರೇಶ್​, ಬಿ. ರೋಹಿತ್​, ದೀಾ ಶಿವಕುಮಾರ್​ ಒಳಗೊಂಡ ತಮಿಳುನಾಡು ತಂಡ 4 ನಿಮಿಷ, 5.30 ಸೆಕೆಂಡ್​ಗಳಲ್ಲಿ ಈಜಿ ಚಿನ್ನ ಗೆದ್ದುಕೊಂಡಿತು. ಈ ಮೂಲಕ ಮಹಾರಾಷ್ಟ್ರ ತಂಡ ಕಳೆದ ವರ್ಷ ನಿರ್ಮಿಸಿದ್ದ ದಾಖಲೆಯನ್ನು (4 ನಿ,6.84 ಸೆ) ಮುರಿಯಿತು. ಈ ಬಾರಿ ಮಹಾರಾಷ್ಟ್ರ ತಂಡ ರಜತಕ್ಕೆ ತೃಪ್ತಿಪಟ್ಟಿತು.

ವೃತ್ತಿ, ಶ್ರೀನಿಧಿಗೆ ಬಂಗಾರ

ತೆಲಂಗಾಣದ ವೃತ್ತಿ ಅಗರ್ವಾಲ್​ ಮಹಿಳೆಯರ 1,500 ಮೀ. ಫ್ರೀಸ್ಟೆ$ಲ್​ ವಿಭಾಗದಲ್ಲಿ 17 ನಿಮಿಷ, 45.63 ಸೆಕೆಂಡ್​ಗಳಲ್ಲಿ ಈಜಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ತಮಿಳುನಾಡಿನ ಶ್ರೀನಿಧಿ ನಟೇಶನ್​ ಮಹಿಳೆಯರ 209 ಮೀ. ಮೆಡ್ಲೆ ವಿಭಾಗದಲ್ಲಿ ಕರ್ನಾಟಕದ ಹಷಿಕಾ ರಾಮಚಂದ್ರಗೆ ಆಘಾತ ನೀಡಿ ಚಿನ್ನಕ್ಕೆ ಮುತ್ತಿಟ್ಟರು. ಶ್ರೀನಿಧಿ 2 ನಿಮಿಷ, 25.52 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಹಷಿಕಾಗಿಂತ ಕೇವಲ 0.32 ಸೆಕೆಂಡ್​ಗಳಿಂದ ಮೇಲುಗೈ ಸಾಧಿಸಿದರು.