ಕ್ರೀಡೆ

ದೇವರ ದಯೆ ಕೊನೆಗೂ ಹೊರಬಂತು: ಅಭಿಷೇಕ್​ ಪ್ರದರ್ಶಿಸಿದ ಕಾಗದದ ರಹಸ್ಯ ಬಿಚ್ಚಿಟ್ಟ ಟ್ರಾವಿಸ್​ ಹೆಡ್​! Abhishek sharma

Abhishek sharma : ನಿನ್ನೆ (ಏಪ್ರಿಲ್​ 12) ರಾತ್ರಿ ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ತಮ್ಮ ಬ್ಯಾಟಿಂಗ್​ ಮೂಲಕ ಅಬ್ಬರಿಸಿ ಬೊಬ್ಬರಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದರು. ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದ ಅಭಿಶೇಕ್​, ಒಟ್ಟು 55 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ 141 ರನ್ ಗಳಿಸಿ ಐಪಿಎಲ್​ನಲ್ಲಿ ತಮ್ಮ ಹೆಸರಿಗೆ ದಾಖಲೆಯೊಂದನ್ನು ಸೇರಿಸಿಕೊಂಡರು.

ಶತಕ ಗಳಿಸಿದ ನಂತರ, ಅಭಿಷೇಕ್ ಶರ್ಮ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಅಭಿಷೇಕ್​ ಅವರು ತಮ್ಮ ಜೇಬಿನಿಂದ ಒಂದು ಕಾಗದವನ್ನು ತೆಗೆದು, ಅದನ್ನು ಎಲ್ಲರಿಗೂ ಪ್ರದರ್ಶಿಸಿದರು. ಕಾಗದದ ಮೇಲೆ ಇದು ಆರೆಂಜ್ ಆರ್ಮಿಗಾಗಿ ಎಂದು ಬರೆಯಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಷೇಕ್​ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಎಸ್​ಆರ್​ಎಚ್​ ತಂಡ ಸತತ ಪಂದ್ಯಗಳನ್ನು ಸೋತಿದ್ದರಿಂದ ಈ ಪಂದ್ಯಕ್ಕೂ ಮುನ್ನವೇ ಅಭಿಷೇಕ್​ ಒಂದು ಟಿಪ್ಪಣಿ ಬರೆದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನಿಜವಾದ ಸತ್ಯವನ್ನು ಹೈದರಾಬಾದ್‌ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಬಹಿರಂಗಪಡಿಸಿದ್ದಾರೆ. ಕಳೆದ 6 ಪಂದ್ಯಗಳಿಂದಲೂ ಆ ಪತ್ರ ಅವರ ಜೇಬಿನಲ್ಲಿದೆ ಎಂದು ಹೆಡ್​ ಹೇಳಿದರು. ದೇವರ ದಯೆಯಿಂದ, ಪಂಜಾಬ್ ವಿರುದ್ಧದ ಪಂದ್ಯದ ನಂತರ ಅದು ಹೊರಬಂದಿದೆ ಎಂದರು.

ಅದೇನೆಂದರೆ, ಅಭಿಷೇಕ್ ಶರ್ಮ ಐಪಿಎಲ್ ಆರಂಭಕ್ಕೂ ಮುನ್ನವೇ ಪತ್ರ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದರು. ಆದರೆ, ಕಳೆದ 5 ಪಂದ್ಯಗಳಲ್ಲಿ ಅವರು ಸರಿಯಾಗಿ ಪ್ರದರ್ಶನ ನೀಡಿಲ್ಲ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಅವರು ಆ ಪತ್ರವನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗಿದೆ.

ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 245 ರನ್ ಗಳಿಸಿತು. ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ (82 ರನ್​ 36 ಎಸೆತ, 6 ಬೌಂಡರಿ, 6 ಸಿಕ್ಸರ್), ಪ್ರಿಯಾಂಶ್​ ಆರ್ಯ (36 ರನ್​, 13 ಎಸೆತ, 2 ಬೌಂಡರಿ, 4 ಸಿಕ್ಸರ್​) ಪ್ರಭ್ ಸಿಮ್ರಾನ್ ಸಿಂಗ್ (42 ರನ್​ 23 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ಕ್ ಸ್ಟೊಯಿನಿಸ್ (ಔಟಾಗದೆ 34 ರನ್​, 11 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ತಂಡವು ಬೃಹತ್​ ಮೊತ್ತವನ್ನು ಕಲೆಹಾಕಿತು. ಎಸ್‌ಆರ್‌ಎಚ್ ಬೌಲರ್‌ಗಳಲ್ಲಿ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರೆ, ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು.

ಬಳಿಕ ಪಂಜಾಬ್​ ನೀಡಿದ ಗುರಿ ಬೆನ್ನತ್ತಿದ ಎಸ್​ಆರ್​ಎಚ್​ ಪರ ಅಭಿಷೇಕ್ ಶರ್ಮಾ (141 ರನ್​, 55 ಎಸೆತ, 14 ಬೌಂಡರಿ, 10 ಸಿಕ್ಸರ್) ವಿಧ್ವಂಸಕ ಶತಕ ಗಳಿಸಿದರು. ಟ್ರಾವಿಸ್ ಹೆಡ್ (66 ರನ್​, 37 ಎಸೆತ, 9 ಬೌಂಡರಿ, 3 ಸಿಕ್ಸರ್) ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಸತತ ಸೋಲುಗಳಿಂದ ಕಂಗೆಟ್ಟಿದ ಎಸ್​ಆರ್​ಎಚ್​ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. (ಏಜೆನ್ಸೀಸ್​)