ಹೈದರಾಬಾದ್: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ಅವರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ಆಟಗಾರ ಅಭಿಷೇಕ್ ಶರ್ಮ ಕೂಡ ಒಬ್ಬರು. ತಮ್ಮ ಅಬ್ಬರದ ಬ್ಯಾಟಿಂಗ್ನಿಂದ ಎದುರಾಳಿ ತಂಡದಲ್ಲಿ ಭಯ ಹುಟ್ಟಿಸುತ್ತಿರುವ ಈ ಎಡಗೈ ದಾಂಡಿಗನಿಗೆ ಕೇವಲ 23 ವಯಸ್ಸು. ಇದುವರೆಗೂ ಆಡಿದ 14 ಪಂದ್ಯಗಳಲ್ಲಿ 533 ರನ್ ಗಳಿಸುವ ಮೂಲಕ ಎಸ್ಆರ್ಎಚ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಅಭಿಷೇಕ್ ಶರ್ಮ ವಿಶೇಷ ದಾಖಲೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ಲೋಕದ ಕಿಂಗ್, ದಾಖಲೆಗಳ ಸರದಾರ ಹಾಗೂ ರನ್ ಮೆಷಿನ್ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅವರ 8 ವರ್ಷದ ದಾಖಲೆಯನ್ನು ಅಭಿಷೇಕ್ ಶರ್ಮ ಪುಡಿ ಪುಡಿ ಮಾಡಿದ್ದಾರೆ. ಹೌದು, ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಯನ್ನು ಹಿಂದಿಕ್ಕೆ ಅಭಿಷೇಕ್ ಶರ್ಮ ಮೊದಲ ಸ್ಥಾನಕ್ಕೇರಿದ್ದಾರೆ. ನಿನ್ನೆ (ಮೇ 19) ಪಂಜಾಬ್ ಕಿಂಗ್ಸ್ ವಿರುದ್ಧ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 69ನೇ ಐಪಿಎಲ್ ಪಂದ್ಯದಲ್ಲಿ ಅಭಿಷೇಕ್ ಈ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಎರಡನೇ ಇನ್ನಿಂಗ್ಸ್ನಲ್ಲಿ ರಿಷಿ ಧವನ್ ಎಸೆದ 6ನೇ ಓವರ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುವುದರೊಂದಿಗೆ ಅಭಿಷೇಕ್ ಅವರು ಕೊಹ್ಲಿ ದಾಖಲೆ ಮುರಿದರು. 82 ಮೀಟರ್ ಉದ್ದದ ಸಿಕ್ಸರ್ನೊಂದಿಗೆ ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ 39ನೇ ಸಿಕ್ಸರ್ ಸಿಡಿಸಿದ ಅಭಿಷೇಕ್, 2016ರ ಐಪಿಎಲ್ ಸೀಸನ್ನಲ್ಲಿ ಕೊಹ್ಲಿ ಅವರ 38 ಸಿಕ್ಸರ್ ದಾಖಲೆಯನ್ನು ಮುರಿದರು. ಕಳೆದ ಎಂಟು ವರ್ಷದಿಂದ ಒಂದೇ ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದ ಕೊಹ್ಲಿ, ಇದೀಗ ಅಭಿಷೇಕ್ ಶರ್ಮರಿಂದಾಗಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸಿಕ್ಸರ್ ಹಿಂದೆ ಬಿದ್ದ ಕೊಹ್ಲಿ
ಇನ್ನು ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಿಂಗ್ ಕೊಹ್ಲಿ, ಸಿಕ್ಸರ್ಗಳ ಸುರಿಮಳೆಗೈಯುತ್ತಿದ್ದಾರೆ. ಇದುವರೆಗೂ ಆಡಿದ 14 ಪಂದ್ಯಗಳಲ್ಲಿ 708 ರನ್ಗಳೊಂದಿಗೆ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಆರೇಂಜ್ ಕ್ಯಾಪ್ ಒಡೆಯರಾಗಿದ್ದಾರೆ. 14 ಪಂದ್ಯಗಳಿಂದ 37 ಸಿಕ್ಸರ್ ಸಿಡಿಸಿರುವ ಕೊಹ್ಲಿ ಅಭಿಷೇಕ್ ದಾಖಲೆಯನ್ನು ಮುರಿದು ಮತ್ತೆ ನಂಬರ್ 1ರ ಸ್ಥಾನ ಅಲಂಕರಿಸುವ ಎಲ್ಲ ಅವಕಾಶಗಳು ಇವೆ. ಏಕೆಂದರೆ, ಪ್ರಸಕ್ತ ಐಪಿಎಲ್ನಲ್ಲಿ ಆರ್ಸಿಬಿ ಪ್ಲೇಆಫ್ ಪ್ರವೇಶ ಮಾಡಿರುವುದರಿಂದ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶವಿದ್ದು, ಕೊಹ್ಲಿ ಮತ್ತೊಮ್ಮೆ ಸಿಡಿದರೆ ಅಭಿಷೇಕ್ ದಾಖಲೆ ಉಡೀಸ್ ಆಗಲಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಯುವ ಆರಂಭಿಕ ಅಭಿಷೇಶ್ ಶರ್ಮ (66 ರನ್. 28 ಎಸೆತ, 5 ಬೌಂಡರಿ, 6 ಸಿಕ್ಸರ್) ಬಿರುಪಿನಾಟದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಬಿಪಿಎಲ್-17ರ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 4 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಬಳಗ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿ ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆಯಿತು. ಪಂಜಾಬ್ ಕಿಂಗ್ಸ್ ತಂಡ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ. ಆರ್ಜಿಐ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಂಜಾಬ್, ಪ್ರಲ್ ಸಿಮ್ರಾನ್ ಸಿಂಗ್ (71 ರನ್, 45 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ರಿಲೀ ರೋನ್ (49 ರನ್. 24 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಬಲದಿಂದ 5 ವಿಕೆಟ್ ಗೆ 214 ರನ್ಳ ಬೃಹತ್ ಸವಾಲೆಸೆಯಿತು. ಪ್ರತಿಯಾಗಿ ಅಭಿಷೇಕ್ ಹಾಗೂ ಹೆನ್ರಿಕ್ ಕ್ಲಾಸೇನ್ (42, 26 2, 3, 2 ಸಿಕ್ಸರ್) ಆಟದ ಬಲದಿಂದ 19.1 ಓವರ್‌ಗಳಲ್ಲಿ 6 ವಿಕೆಟ್ 215 ರನ್ ಗಳಿಸಿ ತವರಿನಲ್ಲಿ ಜಯದ ತೇಕೆ ಹಾಕಿತು. (ಏಜೆನ್ಸೀಸ್)