SRH : ಕಳೆದ ಬಾರಿಯ ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಸನ್‌ರೈಸರ್ಸ್ ಹೈದರಾಬಾದ್ ( SRH ) ತಂಡ ಪ್ರಸಕ್ತ ಸೀಸನ್ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ತೋರುತ್ತಿಲ್ಲ. ಟೂರ್ನಿ ಆರಂಭವಾಗುವ ಮೊದಲು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದ ಎಸ್‌ಆರ್‌ಎಚ್ ತಂಡ, ಇದೀಗ ಕನಿಷ್ಠ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಹೆಣಗಾಡುತ್ತಿದೆ.
ಈ ಸೀಸನ್ನಲ್ಲಿ ಇಲ್ಲಿಯವರೆಗೆ 9 ಪಂದ್ಯಗಳನ್ನು ಆಡಿರುವ ಪ್ಯಾಟ್ ಕಮಿನ್ಸ್ ಪಡೆ, ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದ್ದು, 6 ಪಂದ್ಯಗಳನ್ನು ಸೋತಿದೆ. ಎಸ್‌ಆರ್‌ಎಚ್ ತಂಡ 6 ಅಂಕಗಳು ಮತ್ತು -1.103 ನೆಟ್ ರನ್ ರೇಟ್ನೊಂದಿಗೆ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಪ್ರಸಕ್ತ ಐಪಿಎಲ್ನಲ್ಲಿ ಭಾರಿ ಸಂಕಷ್ಟದಲ್ಲಿರುವ ಸಮಯದಲ್ಲೇ ಸನ್‌ರೈಸರ್ಸ್ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ನಿರ್ಧಾರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಎಸ್‌ಆರ್‌ಎಚ್ ಮ್ಯಾನೇಜ್‌ಮೆಂಟ್ ಮಾಲ್ಡೀವ್ಸ್‌ಗೆ ಕಳುಹಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿನ ನಂತರ, ಇಡೀ ತಂಡವನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಗಿದೆ. ಆಟಗಾರರು ಮಾಲ್ಡೀವ್ಸ್‌ಗೆ ಬಂದಿಳಿಯುವ ವಿಡಿಯೋವನ್ನು ಎಸ್‌ಆರ್‌ಎಚ್ ತಂಡ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದೆ.
ಹೈದರಾಬಾದ್ ತಂಡವು ತಮ್ಮ ಮುಂದಿನ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಈ ಪಂದ್ಯವು ಮೇ 2ರ ಶುಕ್ರವಾರ ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಸ್‌ಆರ್‌ಎಚ್ ತಂಡವು ಮಾಲ್ಡೀವ್ಸ್ ಪ್ರವಾಸವನ್ನು ಪೂರ್ಣಗೊಳಿಸಿದ ನಂತರ ಏಪ್ರಿಲ್ 30 ಅಥವಾ ಮೇ 1 ರಂದು ಭಾರತಕ್ಕೆ ಮರಳುವ ಸಾಧ್ಯತೆಯಿದೆ.
ಈ ಸೀಸನ್ನ ಮಧ್ಯದಲ್ಲಿ ಸನ್‌ರೈಸರ್ಸ್ ತಂಡವನ್ನು ಮಾಲ್ಡೀವ್ಸ್‌ಗೆ ಕಳುಹಿಸಿರುವುದರ ಹಿಂದೆ ಒಂದು ಕಾರಣವಿದೆ ಎಂದು ಹೇಳಲಾಗುತ್ತಿದೆ. ಈ ಪ್ರವಾಸವು ಆಟಗಾರರಿಗೆ ವಿಶ್ರಾಂತಿ ನೀಡುವುದಲ್ಲದೆ, ಹೊಸ ಉತ್ಸಾಹವನ್ನು ತರುತ್ತದೆ ಎಂದು ಸನ್‌ರೈಸರ್ಸ್ ಆಡಳಿತ ಮಂಡಳಿ ನಂಬಿದೆ. ಈ ಪ್ರವಾಸದ ನಂತರ ಪ್ರಮುಖ ಪಂದ್ಯಗಳು ನಡೆಯುವುದರಿಂದ, ಆಟಗಾರರು ಈ ಪಂದ್ಯಗಳಲ್ಲಿ ಹೊಸ ಉತ್ಸಾಹದಿಂದ ಮೈದಾನಕ್ಕೆ ಇಳಿದು ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಾರೆ ಎಂದು ಆಡಳಿತ ಮಂಡಳಿ ನಂಬಿದೆ. ಸನ್‌ರೈಸರ್ಸ್ ತಂಡ ಅಭ್ಯಾಸವನ್ನು ತಪ್ಪಿಸಿ, ಸದ್ಯ ತೆಗೆದುಕೊಂಡಿರುವ ಈ ನಿರ್ಧಾರವು ಎಷ್ಟರ ಮಟ್ಟಿಗೆ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಸೀಸನ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಇನ್ನೂ 5 ಪಂದ್ಯಗಳನ್ನು ಆಡಲಿದೆ. ಸನ್‌ರೈಸರ್ಸ್ ಎಲ್ಲ ಐದು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವಿದೆ. ತಂಡವು ಪ್ರಸ್ತುತ ಮೈನಸ್ ನೆಟ್ ರನ್ ರೇಟ್‌ನಲ್ಲಿರುವ ಕಾರಣ, ಸನ್‌ರೈಸರ್ಸ್ ಎಲ್ಲ ಐದು ಪಂದ್ಯಗಳನ್ನು ಭಾರಿ ಅಂತರದಿಂದ ಗೆದ್ದು ತಮ್ಮ ನೆಟ್ ರನ್ ರೇಟ್ ಅನ್ನು ಸಾಧ್ಯವಾದಷ್ಟು ಸುಧಾರಿಸಿಕೊಳ್ಳಬೇಕಿದೆ. ಹೀಗಿದ್ದಲ್ಲಿ ಮಾತ್ರ ಪ್ಲೇ ಆಫ್ಗೆ ಹೋಗುವ ಸಾಧ್ಯತೆ ಇದೆ. (ಏಜೆನ್ಸೀಸ್)