ನವದಹೆಲಿ: ಅನುಭವಿ ಆಟಗಾರ್ತಿ ಮನಿಕಾ ಬಾತ್ರಾ ಅವರನ್ನು ಹಿಂದಿಕ್ಕುವ ಮೂಲಕ ಶ್ರೀಜಾ ಅಕುಲಾ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ನೂತನ ನಂ. 1 ಆಟಗಾರ್ತಿ ಎನಿಸಿದ್ದಾರೆ. 25 ವರ್ಷದ ಶ್ರೀಜಾ ನೂತನ ಐಟಿಟಿಎಫ್ ವಿಶ್ವ ರ್ಯಾಂಕಿಂಗ್ನಲ್ಲಿ 38ನೇ ಸ್ಥಾನಕ್ಕೇರುವ ಮೂಲಕ ಈ ಸಾಧನೆ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಭಾರತದ ನಂ. 1 ಟೇಬಲ್ ಟೆನಿಸ್ ಆಟಗಾರ್ತಿ ಎನಿಸಿದ್ದ ಮನಿಕಾ ಬಾತ್ರಾ ಈಗ 39ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ಜನವರಿ ಮತ್ತು ಮಾರ್ಚ್ನಲ್ಲಿ ಡಬ್ಲ್ಯುಟಿಟಿ ಪೀಡರ್ ಕರ್ಪಸ್ ಕ್ರಿಸ್ಟಿ ಮತ್ತು ಫೀಡರ್ ಬಿರುಟ್ ಪ್ರಶಸ್ತಿ ಜಯಿಸುವ ಮೂಲಕ ಗಮನಸೆಳೆದಿದ್ದ ಶ್ರೀಜಾ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅನುಭವಿ ಆಟಗಾರ ಶರತ್ ಕಮಲ್ ಜತೆಗೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರು. ಯಶಸ್ವಿನಿ ಘೋರ್ಪಡೆ ಮತ್ತು ಕನ್ನಡತಿ ಅರ್ಚನಾ ಕಾಮತ್ ಕ್ರಮವಾಗಿ 99 ಮತ್ತು 100ನೇ ಸ್ಥಾನದಲ್ಲಿದ್ದಾರೆ. ಶರತ್ ಕಮಲ್ 37ನೇ ಸ್ಥಾನದೊಂದಿಗೆ ಪುರುಷರ ವಿಭಾಗದಲ್ಲಿ ಅಗ್ರ ಭಾರತೀಯರಾಗಿ ಮುಂದುವರಿದಿದ್ದರೆ, ಜಿ. ಸತ್ಯನ್ ಮತ್ತು ಮಾನವ್ ಠಕರ್ ಕ್ರಮವಾಗಿ 60 ಮತ್ತು 61ನೇ ಸ್ಥಾನದಲ್ಲಿದ್ದಾರೆ.
ಕೆಲ ತಿಂಗಳ ಹಿಂದೆ ಭಾರತ ಅಗ್ರ ಟಿಟಿ ಆಟಗಾರ ಎನಿಸಿದ್ದ ರಾಷ್ಟ್ರೀಯ ಚಾಂಪಿಯನ್ ಹಮೀರ್ತ್ ದೇಸಾಯಿ ಈಗ 64ನೇ ಸ್ಥಾನಕ್ಕಿಳಿದಿದ್ದಾರೆ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತ ಈಗಾಗಲೆ ತಂಡ ವಿಭಾಗದಲ್ಲಿ ಅರ್ಹತೆ ಸಂಪಾದಿಸಿದ್ದರೆ, ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್ ಅರ್ಹತೆ ಪರಿಗಣಿಸಲು ಮೇ 16ರ ವಿಶ್ವ ರ‍್ಯಾಂಕಿಂಗ್ ಅಂತಿಮ ಗಡುವು ಆಗಿದೆ.