

ಜೈಪುರ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಸುಲಭ ಚೇಸಿಂಗ್ಗೆ ನೆರವಾದ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (104*ರನ್, 60 ಎಸೆತ, 9 ಬೌಂಡರಿ, 7 ಸಿಕ್ಸರ್) ಅವರ ಆಟವನ್ನು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಶ್ಲಾಘಿಸಿದ್ದಾರೆ.
"ಜೈಸ್ವಾಲ್ ಅತ್ಯಂತ ಪಕ್ವತೆಯೊಂದಿಗೆ ಆಡಿದರು. ಚೆಂಡನ್ನು ಅಳೆದುತೂಗಿ ಆಡಿದರು. ಕ್ರಿಕೆಟಿಂಗ್ ಶಾಟ್ಗಳನ್ನೇ ಆಯ್ದುಕೊಂಡರು. ಸೂಕ್ತ ಸಮಯವನ್ನು ತೆಗೆದುಕೊಳ್ಳುವ ಮೂಲಕ ಸಮತೋಲನದ ಬ್ಯಾಟಿಂಗ್ ಪ್ರದರ್ಶಿಸಿದರು' ಎಂದು ಲಾರಾ ಹೇಳಿದ್ದಾರೆ.
ಮುಂಬೈ ತಂಡದ 180 ರನ್ ಸವಾಲಿಗೆ ಪ್ರತಿಯಾಗಿ ಜೈಸ್ವಾಲ್, ಜೋಸ್ ಬಟ್ಲರ್ (35) ಜತೆಗೆ ಮೊದಲ ವಿಕೆಟ್ಗೆ 74 ರನ್ ಸೇರಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ನಾಯಕ ಸಂಜು ಸ್ಯಾಮ್ಸನ್ (38*) ಜತೆಗೂಡಿ ಮುರಿಯದ 2ನೇ ವಿಕೆಟ್ಗೆ 65 ಎಸೆತಗಳಲ್ಲಿ 109 ರನ್ ಸೇರಿಸುವ ಮೂಲಕ ಜೈಸ್ವಾಲ್, 18.4 ಓವರ್ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ರಾಜಸ್ಥಾನವನ್ನು ಗೆಲುವಿನ ದಡ ಸೇರಿಸಿದರು.
ಐಪಿಎಲ್ನಲ್ಲಿ ರನ್ಬರ ಎದುರಿಸಿದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಬ್ಯಾಟಿಂಗ್ನ ಮೂಲಸೂತ್ರಗಳತ್ತ ಗಮನಹರಿಸಿದೆ. ಆರಂಭದಿಂದಲೇ ಚೆಂಡನ್ನು ಸರಿಯಾಗಿ ಗಮನಿಸಿ ಆಡಲು ನಿರ್ಧರಿಸಿದ್ದೆ ಎಂದು ಯಶಸ್ವಿ ಜೈಸ್ವಾಲ್ ಹೇಳಿದ್ದಾರೆ.
ನಾವು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆವು. ತಿಲಕ್ ವರ್ಮ ಮತ್ತು ನೆಹಾಲ್ ವಧೇರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇಲ್ಲದಿದ್ದರೆ 180ರ ಸನಿಹ ತಲುಪುವುದು ಕಷ್ಟಕರವಾಗುತ್ತಿತ್ತು ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ ತಂಡವೊಂದರ ಪರ 5 ವಿಕೆಟ್ ಗೊಂಚಲು ಮತ್ತು ಶತಕ ದಾಖಲಾದ 3ನೇ ದೃಷ್ಟಾಂತ ಇದಾಗಿದೆ. 2022ರಲ್ಲಿ ರಾಜಸ್ಥಾನದ ಬಟ್ಲರ್-ಚಾಹಲ್ ಮತ್ತು 2023ರಲ್ಲಿ ಗುಜರಾತ್ನ ಗಿಲ್-ಮೋಹಿತ್ ಶರ್ಮ ಈ ಸಾಧನೆ ಮಾಡಿದ್ದರು.