ಮೊಹಾಲಿ: ಚುಟುಕು ಕ್ರಿಕೆಟ್ ವಿಶ್ವಕಪ್ ಸಿದ್ಧತೆಯ ಕೊನೇ ಭಾಗವಾಗಿ ಭಾರತ ತಂಡ ಪ್ರವಾಸಿ ಅಫ್ಘಾನಿಸ್ತಾನ ತಂಡದ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದ್ದು, ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ಗುರುವಾರ ಮೊದಲ ಮುಖಾಮುಖಿ ನಡೆಯಲಿದೆ. ನಾಯಕ ರೋಹಿತ್ ಶರ್ಮ 14 ತಿಂಗಳ ಬಳಿಕ ಟಿ20ಯಲ್ಲಿ ಭಾರತದ ಸಾರಥ್ಯ ವಹಿಸಿಕೊಳ್ಳಲಿದ್ದರೆ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ಪುನರಾಗಮನ 2ನೇ ಪಂದ್ಯಕ್ಕೆ ಮುಂದೂಡಿಕೆಯಾಗಿದೆ. ಇನ್ನು ಟಿ20 ವಿಶ್ವಕಪ್, ಏಷ್ಯಾಕಪ್ ಹೊರತಾಗಿ ಭಾರತ-ಆಫ್ಘನ್ ನಡುವಿನ ಮೊದಲ ದ್ವಿಪಯ ಟಿ20 ಸರಣಿಯೂ ಇದಾಗಿದೆ ಎಂಬುದು ವಿಶೇಷವಾಗಿದೆ.
ಜೂನ್ನಲ್ಲಿ ಅಮೆರಿಕ-ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಅದಕ್ಕೆ ಮುನ್ನ ಐಪಿಎಲ್ 17ನೇ ಆವೃತ್ತಿಯೇ ಭಾರತೀಯ ಟಿ20 ಅಭ್ಯಾಸಕ್ಕೆ ಪ್ರಮುಖ ವೇದಿಕೆಯಾಗಿದೆ. ಅದಕ್ಕೆ ಮುನ್ನ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಹೀಗಾಗಿ ಭಾರತ ತಂಡದ ಪರ ಆಟಗಾರರ ಟಿ20 ಕೌಶಲ ಪರೀಸಲು ಇದೇ ಕೊನೇ ಅವಕಾಶವೆನಿಸಿದೆ.
ಭಾರತದಲ್ಲೇ ನಡೆದ ಕಳೆದ ಏಕದಿನ ವಿಶ್ವಕಪ್ನಲ್ಲಿ ಆಫ್ಘನ್ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂಥ ಬಲಿಷ್ಠ ತಂಡಗಳನ್ನು ಮಣಿಸಿ ಗಮನಸೆಳೆದಿತ್ತು. ಚುಟುಕು ಕ್ರಿಕೆಟ್ನಲ್ಲಿ ಆಫ್ಘನ್ ತಂಡ ಇನ್ನಷ್ಟು ಹೆಚ್ಚಿನ ಅನುಭವ ಹೊಂದಿದೆ. ಹೀಗಾಗಿ ಭಾರತ ತಂಡ ಲುವಾಗಿ ಪರಿಗಣಿಸಿದರೆ ಅಪಾಯದ ಭೀತಿ ಇದೆ.
ರೋಹಿತ್, ಕೊಹ್ಲಿ 2022ರ ನವೆಂಬರ್ನಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಹೊರಬಿದ್ದ ಬಳಿಕ ಭಾರತ ಪರ ಯಾವುದೇ ಚುಟುಕು ಕ್ರಿಕೆಟ್ ಪಂದ್ಯ ಆಡಿರಲಿಲ್ಲ. ಇದರಿಂದಾಗಿ ಭಾರತ ಪರ ಅವರಿಬ್ಬರ ಟಿ20 ಕ್ರಿಕೆಟ್ ಜೀವನ ಮುಗಿದೇ ಹೋಯಿತೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಇದೀಗ ಆಫ್ಘನ್ ವಿರುದ್ಧ ಸರಣಿಗೆ ಅವರಿಬ್ಬರು ಸ್ಥಾನ ಪಡೆಯುವುದರೊಂದಿಗೆ, ಮುಂಬರುವ ಟಿ20 ವಿಶ್ವಕಪ್ನಲ್ಲೂ ಅವರಿಬ್ಬರು ಕಣಕ್ಕಿಳಿಯುವ ನಿರೀೆ ಹೆಚ್ಚಾಗಿದೆ. ಹೀಗಾಗಿ ಅವರಿಬ್ಬರಿಗೆ ಈ ಸರಣಿ ಟಿ20 ವಿಶ್ವಕಪ್ಗೆ ಆಯ್ಕೆ ಟ್ರಯಲ್ಸ್ ಎಂದೂ ಬಣ್ಣಿಸಲಾಗುತ್ತಿದೆ.
ಕೊಹ್ಲಿ ಮೊದಲ ಪಂದ್ಯ ಆಡಲ್ಲ
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಮೊದಲ ಟಿ20 ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ. ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಈ ವಿಷಯವನ್ನು ತಿಳಿಸಿದ್ದಾರೆ. ಕೊಹ್ಲಿ ಅವರ ಪುತ್ರಿ ವಾಮಿಕಾ ಗುರುವಾರ 3ನೇ ವರ್ಷದ ಹುಟ್ಟುಹಬ್ಬ ಆಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಗಳೊಂದಿಗೆ ಅಮೂಲ್ಯ ಸಮಯ ಕಳೆಯುವ ಸಲುವಾಗಿ ಕೊಹ್ಲಿ ಪಂದ್ಯ ಆಡುತ್ತಿಲ್ಲ ಎನ್ನಲಾಗುತ್ತಿದೆ. ಇಂದೋರ್ (ಜ.14) ಮತ್ತು ಬೆಂಗಳೂರಿನಲ್ಲಿ (ಜ.17) ನಡೆಯಲಿರುವ ಮುಂದಿನ 2 ಪಂದ್ಯಗಳಲ್ಲಿ ಕೊಹ್ಲಿ ಆಡಲಿದ್ದಾರೆ.
ದ್ರಾವಿಡ್ ಬರ್ತ್ಡೇಗೆ ಗೆಲುವಿನ ಉಡುಗೊರೆ ನಿರೀಕ್ಷೆ
ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಗುರುವಾರ 51ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಭಾರತ ತಂಡ ಗೆಲುವಿನೊಂದಿಗೆ ಅವರಿಗೆ ವಿಶೇಷ ಉಡುಗೊರೆ ನೀಡುವ ನಿರೀೆ ಅಭಿಮಾನಿಗಳದ್ದಾಗಿದೆ.
ರಶೀದ್ ಖಾನ್ ಅಲಭ್ಯ
ಪ್ರವಾಸಿ ಅಫ್ಘಾನಿಸ್ತಾನ ತಂಡಕ್ಕೆ ಸರಣಿ ಆರಂಭಕ್ಕೆ ಮುನ್ನವೇ ಆಘಾತವೊಂದು ಎದುರಾಗಿದ್ದು, ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದಿರುವ ಕಾರಣದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಕಳೆದ ಏಕದಿನ ವಿಶ್ವಕಪ್ ಬೆನ್ನಲ್ಲೇ ನವೆಂಬರ್ನಲ್ಲಿ ರಶೀದ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸರಣಿಗೆ ಮುನ್ನ ಅವರು ಫಿಟ್ ಆಗುವ ನಿರೀಕ್ಷೆಯೊಂದಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರಿನ್ನೂ ಫಿಟ್ ಆಗಿಲ್ಲ. ಅವರಿಲ್ಲದೆಯೂ ಯಾವುದೇ ಸವಾಲನ್ನು ಎದುರಿಸಲು ತಂಡ ಸಿದ್ಧವಾಗಿದೆ ಎಂದು ಆಫ್ಘನ್ ನಾಯಕ ಇಬ್ರಾಹಿಂ ಜದ್ರಾನ್ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟೀಮ್ ನ್ಯೂಸ್:
ಭಾರತ: ರೋಹಿತ್ ಜತೆಗೆ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಕೋಚ್ ದ್ರಾವಿಡ್ ಖಚಿತಪಡಿಸಿದ್ದಾರೆ. ಕೊಹ್ಲಿ ಗೈರಿನಲ್ಲಿ ಶುಭಮಾನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಬಹುದು. ತಂಡದಲ್ಲಿ ವಿಕೆಟ್ ಕೀಪರ್ಗಳಾಗಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮ ಸ್ಥಾನ ಪಡೆದಿದ್ದಾರೆ. ಈ ಪೈಕಿ ಮೊದಲ ಪಂದ್ಯದಲ್ಲಿ ಯಾರು ವಿಕೆಟ್ ಕೀಪರ್ ಆಗಿ ಆಡಲಿದ್ದಾರೆ ಎಂಬುದು ಸ್ಪಷ್ಟವಿಲ್ಲ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ತಿಲಕ್ ವರ್ಮ, ಸಂಜು ಸ್ಯಾಮ್ಸನ್/ಜಿತೇಶ್ ಶರ್ಮ (ವಿ.ಕೀ), ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಆವೇಶ್ ಖಾನ್, ಮುಕೇಶ್ ಕುಮಾರ್, ಅರ್ಷದೀಪ್ ಸಿಂಗ್.
ಅಫ್ಘಾನಿಸ್ತಾನ: ರಶೀದ್ ಖಾನ್ ಅಲಭ್ಯರಾಗಿರುವುದರಿಂದ ಅಫ್ಘಾನಿಸ್ತಾನ ತಂಡದ ಬೌಲಿಂಗ್ ವಿಭಾಗ ಹಿನ್ನಡೆ ಎದುರಿಸಿದೆ. ಅವರ ಗೈರಿನಲ್ಲಿ ನಬಿ-ಮುಜೀಬ್ ಮೇಲೆ ಹೆಚ್ಚಿನ ಒತ್ತಡವಿದೆ. ರಶೀದ್ ಸ್ಥಾನವನ್ನು ಕೈಸ್ ಅಹ್ಮದ್ ತುಂಬಲಿದ್ದಾರೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ಗಳು ಕಳೆದ ವಿಶ್ವಕಪ್ನ ಫಾರ್ಮ್ ಮುಂದುವರಿಸಬೇಕಿದೆ.
ಸಂಭಾವ್ಯ ತಂಡ: ಹಜ್ರಾತುಲ್ಲಾ ಜಜೈ, ರಹಮಾನ್ಉಲ್ಲಾ ಗುರ್ಬಜ್ (ವಿ.ಕೀ), ಇಬ್ರಾಹಿಂ ಜದ್ರಾನ್ (ನಾಯಕ), ಅಜ್ಮತ್ಉಲ್ಲಾ ಒಮರ್ಜಾಯಿ, ನಜಿಬುಲ್ಲಾ ಜದ್ರಾನ್, ಮೊಹಮದ್ ನಬಿ, ಗುಲ್ಬಾದಿನ್ ನೈಬ್/ಕರೀಂ ಜನತ್, ಮುಜೀಬ್ ಉರ್ ರೆಹಮಾನ್, ಕೈಸ್ ಅಹ್ಮದ್, ನವೀನ್ ಉಲ್ ಹಕ್, ಝಲ್ಲಾಕ್ ಫಾರೂಖಿ.
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.
ಮುಖಾಮುಖಿ: 5
ಭಾರತ: 4
ಅ್ಘಾನಿಸ್ತಾನ: 0
ರದ್ದು: 1
*ಭಾರತವನ್ನು ಅದರ ನೆಲದಲ್ಲೇ ಎದುರಿಸುವುದು ಬಲು ಕಠಿಣ. ಆದರೆ ನಾವಿಲ್ಲಿಗೆ ಗೆಲ್ಲಲು ಮತ್ತು ನಮ್ಮ ಕೌಶಲ ತೋರಿಸಲು ಬಂದಿದ್ದೇವೆ. ಟಿ20 ಕ್ರಿಕೆಟ್ನಲ್ಲಿ ನಾವು ಹಲವು ಉತ್ತಮ ಆಟಗಾರರನ್ನು ಹೊಂದಿದ್ದೇವೆ. ಈ ಕ್ರಿಕೆಟ್ ಪ್ರಕಾರದಲ್ಲಿ ನಾವು ಉತ್ತಮ ತಂಡವನ್ನು ಹೊಂದಿದ್ದೇವೆ. ಹೀಗಾಗಿ ಉತ್ತಮ ನಿರ್ವಹಣೆಯ ವಿಶ್ವಾಸವಿದೆ.
> ಇಬ್ರಾಹಿಂ ಜದ್ರಾನ್, ಅಫ್ಘಾನಿಸ್ತಾನ ತಂಡದ ನಾಯಕ