ನವದೆಹಲಿ: ಕ್ರೀಡಾಪಟುಗಳು ಇನ್ನು ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಗೌರವಗಳಾದ ಖೇಲ್ರತ್ನ ಮತ್ತು ಅರ್ಜುನ ಪ್ರಶಸ್ತಿಗಳಿಗೆ ತಾವೇ ಸ್ವತಃ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶ ಲಭಿಸುವ ನಿರೀಕ್ಷೆ ಇದೆ. ಅರ್ಹ ಕ್ರೀಡಾಪಟುಗಳಿಗೆ ಪ್ರಶಸ್ತಿ ಕೈತಪ್ಪದೇ ಹೋಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಬದಲಾವಣೆಯಾಗಿರಲಿದೆ.
ಕೇಂದ್ರ ಕ್ರೀಡಾ ಸಚಿವಾಲಯದ ಹಾಲಿ ನಿಯಮಾವಳಿಗಳ ಪ್ರಕಾರ, ಕ್ರೀಡಾ ಪ್ರಶಸ್ತಿಗಳಿಗೆ ಅರ್ಹ ಕ್ರೀಡಾಪಟುಗಳ ಹೆಸರನ್ನು ಆಯಾ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು, ರಾಜ್ಯ ಸರ್ಕಾರಗಳು, ಅವರು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ಈ ಹಿಂದಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರು ನಾಮನಿರ್ದೇಶನ ಮಾಡಲು ಅಥವಾ ಶಿಫಾರಸು ಸಲ್ಲಿಸಲು ಅವಕಾಶವಿದೆ. ಆದರೆ ಈ ವರ್ಷ ಕರೊನಾ ಹಾವಳಿ ಮತ್ತು ಲಾಕ್ಡೌನ್ನಿಂದಾಗಿ ಕ್ರೀಡಾಪಟುಗಳಿಗೆ ಸ್ವಯಂ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಮುಂದಿನ ವರ್ಷಗಳಲ್ಲಿ ಇದು ಮುಂದುವರಿಯುವ ಸಾಧ್ಯತೆ ಇದೆ.
'ಈ ವರ್ಷ ಕೋವಿಡ್-19ರ ಹಾಲಿ ಪರಿಸ್ಥಿತಿಯಿಂದಾಗಿ ಕ್ರೀಡಾ ಪ್ರಶಸ್ತಿಗಳಿಗೆ ಸ್ವಯಂ ಅರ್ಜಿ ಸಲ್ಲಿಸಲು ನಾವು ಅವಕಾಶ ಮಾಡಿಕೊಟ್ಟಿದ್ದೆವು. ಮುಂದಿನ ದಿನಗಳಲ್ಲಿ ಮುಂದುವರಿಸುವ ಬಗ್ಗೆ ಈಗ ಪರಿಶೀಲನೆ ನಡೆಸುತ್ತಿದ್ದೇವೆ' ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಕ್ರೀಡಾಪಟುಗಳ ಹೆಸರನ್ನು ಸರ್ಕಾರವೇ ನೇರವಾಗಿ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡಬೇಕೆಂಬ ಕೆಲ ಕ್ರೀಡಾಪಟುಗಳ ಬೇಡಿಕೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಕ್ರೀಡಾಪಟುಗಳ ನಿರ್ವಹಣೆಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಗಮನಿಸುತ್ತಿರುತ್ತದೆ. ಹೀಗಾಗಿ ಕ್ರೀಡಾಪಟುಗಳ ಸಾಧನೆಯ ಪಟ್ಟಿಯನ್ನು ಪ್ರಶಸ್ತಿ ಆಯ್ಕೆ ಸಮಿತಿಗೆ ಒದಗಿಸುವುದು ಸಾಯ್ಗೆ ಸುಲಭವಾಗಿರುತ್ತದೆ. ಅದನ್ನು ಗಮನಿಸಿ ಕ್ರೀಡಾಪಟುಗಳನ್ನು ಪ್ರಶಸ್ತಿಗೆ ನೇರವಾಗಿ ಆಯ್ಕೆ ಮಾಡಬಹುದು ಎಂಬುದು ಕೆಲ ಕ್ರೀಡಾಪಟುಗಳ ವಾದವಾಗಿದೆ.
ಅರ್ಹರಿಗೆ ಪ್ರಶಸ್ತಿ ಕೈತಪ್ಪುವ ಭೀತಿ ಇರುವುದಿಲ್ಲ
ಕ್ರೀಡಾ ಪ್ರಶಸ್ತಿಗಳಿಗೆ ಈಗ ಕ್ರೀಡಾ ಸಂಸ್ಥೆಗಳ ಶಿಫಾರಸು ಪತ್ರ ಕಡ್ಡಾಯವಾಗಿರುವುದರಿಂದ ಕೆಲ ಅರ್ಹ ಕ್ರೀಡಾಪಟುಗಳೂ ಪ್ರಶಸ್ತಿ ವಂಚಿತರಾಗುವ ದೃಷ್ಟಾಂತಗಳು ಕಾಣಿಸಿವೆ. ಇದಕ್ಕೆ ಆಯಾ ಕ್ರೀಡಾ ಸಂಸ್ಥೆಗಳಲ್ಲಿನ ಸ್ವಜನಪಕ್ಷಪಾತಗಳು ಕಾರಣವಾಗಿವೆ. ಕೆಲ ಕ್ರೀಡಾಪಟುಗಳು ಕ್ರೀಡಾ ಸಂಸ್ಥೆಯ ಅಧಿಕಾರಿಗಳ ಜತೆಗೆ ಉತ್ತಮ ಸಂಬಂಧ ಹೊಂದಿರದ ಕಾರಣ ಶಿಫಾರಸುಗೊಳ್ಳುವುದಿಲ್ಲ. ಇನ್ನುಕೆಲವೊಮ್ಮೆ ಬೇರೊಬ್ಬ ತಮ್ಮ ಆಪ್ತ ಕ್ರೀಡಾಪಟುವಿನ ಹೆಸರು ಶಿಫಾರಸು ಸಲ್ಲಿಸುವ ಸಲುವಾಗಿ ಕೆಲ ಅರ್ಹ ಕ್ರೀಡಾಪಟುಗಳ ಹೆಸರನ್ನು ಕಡೆಗಣಿಸಲಾಗುತ್ತದೆ. ಈ ಬಗ್ಗೆ ಕೆಲವೊಮ್ಮೆ ಕೆಲ ಕ್ರೀಡಾಪಟುಗಳು ಬಹಿರಂಗವಾಗಿ ಅಳಲು ತೋಡಿಕೊಂಡಿದ್ದರೆ, ಇನ್ನು ಕೆಲವರು ತಮ್ಮ ಸಮಯ ಬರುವವರೆಗೆ ಮೌನವಾಗಿ ಕಾಯುತ್ತಾರೆ. ಆದರೆ ಕ್ರೀಡಾಪಟುಗಳೇ ಸ್ವಯಂ ಪ್ರಶಸ್ತಿ ಸಲ್ಲಿಸುವ ಅವಕಾಶ ದೊರೆತರೆ ಆಗ ಯಾವ ಅರ್ಹ ಕ್ರೀಡಾಪಟುವಿಗೂ ಪ್ರಶಸ್ತಿ ಕೈತಪ್ಪುವ ಭೀತಿ ಇರುವುದಿಲ್ಲ.