ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಭಾರತೀಯ ಕ್ರೀಡಾ ವಲಯ ಕಂಬನಿ ಮಿಡಿದಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ, ಒಲಿಂಪಿಕ್ಸ್ ಪದಕ ವಿಜೇತರಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸಹಿತ ಕ್ರೀಡಾ ತಾರೆಯರು ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.
'ಪ್ರಣಬ್ ಮುಖರ್ಜಿ ಅವರ ಆತ್ಮಕ್ಕೆ ಸದ್ಗತಿ ಸಿಗಲಿ' ಎಂದು ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್, ಐಪಿಎಲ್ಗಾಗಿ ಯುಎಇಯಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರು ಟ್ವೀಟಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರು ಎಲ್ಲರಿಂದಲೂ ಗೌರವ ಮತ್ತು ಪ್ರೀತಿ ಪಡೆಯುತ್ತಿದ್ದಂಥ ನಾಯಕರಾಗಿದ್ದರು. ಅವರು ನೀಡಿರುವ ಕೊಡುಗೆಯನ್ನು ದೇಶ ಎಂದೆಂದಿಗೂ ನೆನಪಿಟ್ಟುಕೊಳ್ಳಲಿದೆ ಎಂದು ಸಂಸದರೂ ಆಗಿರುವ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ನಿಧನ
ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು ಎಂದು ಸೈನಾ ನೆಹ್ವಾಲ್ ಬರೆದುಕೊಂಡಿದ್ದಾರೆ. ಹಾಕಿ ಆಟಗಾರ ಯುವರಾಜ್ ವಾಲ್ಮೀಕಿ, ಕುಸ್ತಿಪಟು ಗೀತಾ ಪೋಗಟ್, ಕ್ರಿಕೆಟಿಗರಾದ ಇಶಾಂತ್ ಶರ್ಮ, ಅಜಿಂಕ್ಯ ರಹಾನೆ, ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತಿತರರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.