ಕ್ರೀಡೆ

ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳ ಶೇ. 2 ಕ್ರೀಡಾ ಮೀಸಲಾತಿಯಲ್ಲಿ ಈ 25 ಕ್ರೀಡೆಗಳ ಸಾಧಕರ ಪರಿಗಣನೆ...

ಬೆಂಗಳೂರು: ಪೊಲೀಸ್​ ಮತ್ತು ಅರಣ್ಯ ಇಲಾಖೆ ಸೇರಿ ಇತರ ಎಲ್ಲ ಸರ್ಕಾರಿ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2 ಹುದ್ದೆಗಳನ್ನು ಪ್ರಸಕ್ತ ವರ್ಷದಿಂದಲೇ ಮೀಸಲಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್​ನಲ್ಲಿ ಪ್ರಕಟಿಸಿದ ಬೆನ್ನಲ್ಲೇ, ಕ್ರಿಕೆಟ್​, ಹಾಕಿ, ಫುಟ್​ಬಾಲ್​, ಅಥ್ಲೆಟಿಕ್ಸ್​, ಕಬಡ್ಡಿ ಸಹಿತ ಒಟ್ಟು 25 ಪ್ರಮುಖ ತಂಡ ಮತ್ತು ವೈಯಕ್ತಿಕ ಕ್ರೀಡೆಗಳ ಕ್ರೀಡಾ ಸಾಧಕ ಅಭ್ಯರ್ಥಿಗಳನ್ನು ಮಾತ್ರ ಕ್ರೀಡಾ ಮೀಸಲಾತಿಗೆ ಪರಿಗಣಿಸಲಾಗುವುದು ಎಂದು ಸರ್ಕಾರ ಅಧಿಸೂಚನೆಯ ಮೂಲಕ ಸ್ಪಷ್ಟಪಡಿಸಿದೆ.

ಆರ್ಚರಿ, ಬಾಸ್ಕೆಟ್​ಬಾಲ್​, ಬಾಕ್ಸಿಂಗ್​, ಸೈಕ್ಲಿಂಗ್​, ಫೆನ್ಸಿಂಗ್​, ಜಿಮ್ನಾಸ್ಟಿಕ್ಸ್​, ರೈಫಲ್​ ಶೂಟಿಂಗ್​, ವಾಲಿಬಾಲ್​, ವೇಟ್​ಲಿಫ್ಟಿಂಗ್​, ಕುಸ್ತಿ, ಈಜು, ಜುಡೋ, ಖೋಖೋ, ಟೇಬಲ್​ ಟೆನಿಸ್​, ಲಾನ್​ ಟೆನಿಸ್​, ಬ್ಯಾಡ್ಮಿಂಟನ್​, ಹ್ಯಾಂಡ್​ಬಾಲ್​, ವಾಟರ್​ ಸ್ಪೋರ್ಟ್ಸ್​ಗಳಾದ ರೋಯಿಂಗ್​, ಕಯಾಕಿಂಗ್​, ಕನೋಯಿಂಗ್​ನಲ್ಲೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಕ್ರೀಡಾಪಟುಗಳನ್ನು ಕ್ರೀಡಾ ಮೀಸಲಾತಿಗೆ ಪರಿಗಣಿಸಲಾಗುತ್ತದೆ. ಪ್ರತಿ ಇಲಾಖೆಯ ಮಂಜೂರಾದ ಹುದ್ದೆಗಳ ಶೇ. 2ರಷ್ಟು ಸಂಖ್ಯೆಗೆ ಸೂಕ್ತ ಕ್ರೀಡಾ ಅಭ್ಯರ್ಥಿ ಲಭ್ಯವಾಗದಿದ್ದಲ್ಲಿ ಅಂಥ ಸ್ಥಾನವನ್ನು ಅದೇ ಪ್ರವರ್ಗಕ್ಕೆ ಸೇರಿದ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡಬಹುದು ಎಂದೂ ಕರ್ನಾಟಕ ಸಿವಿಲ್​ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಾವಳಿ ಕರಡುಪ್ರತಿಯ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಜತೆಗೆ ಕ್ರೀಡಾ ಸಾಧಕರ ಅಭ್ಯರ್ಥಿಗಳಿಗೆ ವಿವಿಧ ಕ್ರೀಡಾ ಸಾಧನೆಗಳಿಗೆ ಅನ್ವಯವಾಗಿ ನೀಡಲಾಗುವ ಕೃಪಾಂಕಗಳ ವಿವರವನ್ನೂ ನೀಡಲಾಗಿದ್ದು, ಒಲಿಂಪಿಕ್ಸ್​ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದವರಿಗೆ ಕ್ರಮವಾಗಿ 75, 74, 73 ಕೃಪಾಂಕ ನೀಡಲಾಗುತ್ತದೆ. ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ, ಬೆಳ್ಳಿ, ಕಂಚು ಗೆದ್ದರೆ ಕ್ರಮವಾಗಿ 65, 64, 63 ಕೃಪಾಂಕ ನೀಡಲಾಗುತ್ತದೆ. ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಚಿನ್ನ, ಬೆಳ್ಳಿ, ಕಂಚು ಗೆದ್ದರೆ 62, 61, 60 ಕೃಪಾಂಕ ನೀಡಲಾಗುತ್ತದೆ ಎಂದು ವಿವರಿಸಲಾಗಿದೆ.