ಕ್ರೀಡೆ

ಇಂದಿನಿಂದ ಏಷ್ಯಾದ ಕ್ರೀಡೋತ್ಸವ, 19ನೇ ಏಷ್ಯಾಡ್​ಗೆ ಚೀನಾ ಆತಿಥ್ಯ

ಹಾಂಗ್​ರೆೌ: ಒಲಿಂಪಿಕ್ಸ್​, ಕಾಮನ್ವೆಲ್ತ್​ ಗೇಮ್ಸ್​ಗಳಂತೆ ಏಷ್ಯಾದ ದೇಶಗಳನ್ನು ಒಗ್ಗೂಡಿಸುವ ಕ್ರೀಡಾಕೂಟ ಏಷ್ಯನ್​ ಗೇಮ್ಸ್​. ಇದು ಏಷ್ಯಾದ ಅತಿದೊಡ್ಡ ಕ್ರೀಡಾಹಬ್ಬ. ಏಷ್ಯಾಡ್​ ಎಂದೇ ಜನಪ್ರಿಯವಾಗಿರುವ ಈ ಕ್ರೀಡಾಕೂಟದ ಪ್ರಥಮ ಆವೃತ್ತಿಯನ್ನು ಆಯೋಜಿಸಿದ ಹೆಮ್ಮೆ ಭಾರತದ್ದು. 19ನೇ ಆವೃತ್ತಿಯ ಏಷ್ಯನ್​ ಕ್ರೀಡಾಕೂಟಕ್ಕೆ ಚೀನಾದ ಹಾಂಗ್​ರೆೌ ಸಜ್ಜಾಗಿದೆ.

4 ದಿನಗಳ ಹಿಂದೆಯೇ ಕೆಲ ಕ್ರೀಡಾಸ್ಪರ್ಧೆಗಳು ಶುರುವಾಗಿರುವ ನಡುವೆ, ವರ್ಣರಂಜಿತ ಆರಂಭೋತ್ಸವದೊಂದಿಗೆ ಶನಿವಾರ ಅಧಿಕೃತ ಚಾಲನೆ ನೀಡಲಾಗುತ್ತದೆ. ಏಷ್ಯಾದ 45 ದಿನಗಳು, 40 ಕ್ರೀಡೆಗಳಲ್ಲಿ ಸೆಣಸಲಿರುವ ಕ್ರೀಡಾಕೂಟದಲ್ಲಿ ಒಲಿಂಪಿಕ್ಸ್​ಗಿಂತಲೂ ಅಧಿಕ ಅಂದರೆ 12 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕರೊನಾದಿಂದಾಗಿ ಒಂದು ವರ್ಷ ತಡವಾಗಿ ಆಯೋಜನೆಗೊಂಡಿರುವ ಕ್ರೀಡೋತ್ಸವದಲ್ಲಿ ಪದಕಗಳ ಶತಕ ಸಿಡಿಸುವ ಹಂಬಲದೊಂದಿಗೆ ಭಾರತ ಈ ಬಾರಿ ಕಣಕ್ಕಿಳಿಯಲಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆ ಹಾರಿಸುತ್ತಿರುವ ಒಲಿಂಪಿಕ್ಸ್​&ವಿಶ್ವ ಚಾಂಪಿಯನ್​ ನೀರಜ್​ ಚೋಪ್ರಾ ಸಾರಥ್ಯದಲ್ಲಿ ಭಾರತ ತಂಡ, ಕ್ರೀಡಾ ಶಕ್ತಿಕೇಂದ್ರ ಚೀನಾದಲ್ಲಿ ತನ್ನ ಕ್ರೀಡಾ ತಾಕತ್ತು ತೋರುವ ತವಕದಲ್ಲಿದೆ.

ಏಷ್ಯನ್​ ಗೇಮ್ಸ್​ನಲ್ಲಿ ಮೊದಲ ಬಾರಿಗೆ ಭಾರತದಿಂದ ಗರಿಷ್ಠ ಐವರು ಒಲಿಂಪಿಕ್ಸ್​ ಪದಕ ವಿಜೇತರು ಸ್ಪರ್ಧಿಸಲಿದ್ದಾರೆ. ಅವರೆಂದರೆ ಜಾವೆಲಿನ್​ ತಾರೆ ನೀರಜ್​ ಚೋಪ್ರಾ, ವೇಟ್​ಲ್ಟಿರ್​ ಮೀರಾಬಾಯಿ ಚಾನು, ಷಟ್ಲರ್​ ಪಿವಿ ಸಿಂಧು, ಕುಸ್ತಿಪಟು ಭಜರಂಗ್​ ಪೂನಿಯಾ ಮತ್ತು ಬಾಕ್ಸರ್​ ಲವ್ಲಿನಾ ಬೋಗೋರ್ಹೈನ್​.