ಕ್ರೀಡೆ

ನ್ಯೂಜಿಲೆಂಡ್​ ವಿರುದ್ಧ ಕಾದಾಟದಲ್ಲಿ ವಿರಾಟ್​ ಕೊಹ್ಲಿಗೆ ವಿಶೇಷ ಸಂಭ್ರಮ; ಹೀಗಿದೆ ಕಾರಣ...

ದುಬೈ: ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಭಾನುವಾರ ನಡೆಯಲಿರುವ ಕೊನೆಯ ಲೀಗ್​ ಪಂದ್ಯ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಪಾಲಿಗೆ 300ನೇ ಏಕದಿನ ಪಂದ್ಯವೆನಿಸಿದೆ. ಅವರು ಈ ಸಾಧನೆ ಮಾಡಲಿರುವ 22ನೇ ಆಟಗಾರ ಮತ್ತು 7ನೇ ಭಾರತೀಯ ಎನಿಸಲಿದ್ದಾರೆ.

1998ರಲ್ಲಿ ಮೊಹಮದ್​ ಅಜರುದ್ದೀನ್​ 300 ಏಕದಿನ ಪಂದ್ಯವಾಡಿದ ಮೊದಲ ಆಟಗಾರ ಎನಿಸಿದ್ದರು. ಅವರ 300ನೇ ಪಂದ್ಯ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತದ ಮೊದಲ ಪಂದ್ಯವೆನಿಸಿತ್ತು. ಇದೀಗ 36 ವರ್ಷದ ವಿರಾಟ್​ ಕೊಹ್ಲಿ ಚಾಂಪಿಯನ್ಸ್​ ಟ್ರೋಫಿಯಲ್ಲೇ ಈ ಸಾಧನೆ ಮಾಡಲಿರುವುದು ವಿಶೇಷವಾಗಿದೆ.

ಅಜರುದ್ದೀನ್​ (334) ಜತೆಗೆ ಸಚಿನ್​ ತೆಂಡುಲ್ಕರ್​ (463), ಎಂಎಸ್​ ಧೋನಿ (350), ರಾಹುಲ್​ ದ್ರಾವಿಡ್​ (344), ಸೌರವ್​ ಗಂಗೂಲಿ (311) ಮತ್ತು ಯುವರಾಜ್​ ಸಿಂಗ್​ (304) 300 ಏಕದಿನ ಪಂದ್ಯ ಆಡಿರುವ ಇತರ ಭಾರತೀಯರಾಗಿದ್ದಾರೆ.

2008ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ವಿರಾಟ್​ ಕೊಹ್ಲಿ ಇದುವರೆಗೆ ಆಡಿದ 299 ಪಂದ್ಯಗಳ 287 ಇನಿಂಗ್ಸ್​ಗಳಲ್ಲಿ 51 ಶತಕ, 73 ಅರ್ಧಶತಕಗಳ ಸಹಿತ 58.20ರ ಸರಾಸರಿಯಲ್ಲಿ 14,085 ರನ್​ ಬಾರಿಸಿದ್ದಾರೆ. ಜತೆಗೆ 158 ಕ್ಯಾಚ್​ ಹಿಡಿದಿದ್ದು, 5 ವಿಕೆಟ್​ ಕೂಡ ಕಬಳಿಸಿದ್ದಾರೆ. 1,318 ಬೌಂಡರಿ ಮತ್ತು 152 ಸಿಕ್ಸರ್​ ಸಿಡಿಸಿದ್ದಾರೆ. 183 ರನ್​ ಅವರ ಗರಿಷ್ಠ ಗಳಿಕೆಯಾಗಿದೆ.

ಕೊಹ್ಲಿ ಏಕದಿನ ಮೈಲಿಗಲ್ಲು

ಮೊದಲ ಪಂದ್ಯ: 2008ರಲ್ಲಿ ಶ್ರೀಲಂಕಾ ವಿರುದ್ಧ (ಡಂಬುಲಾ): 12 ರನ್​

50ನೇ ಪಂದ್ಯ: 2011ರಲ್ಲಿ ದ. ಆಫ್ರಿಕಾ ವಿರುದ್ಧ (ನಾಗ್ಪುರ): 1 ರನ್​

100ನೇ ಪಂದ್ಯ: 2013ರಲ್ಲಿ ವಿಂಡೀಸ್​ ವಿರುದ್ಧ (ಓವಲ್​): 22 ರನ್​

150ನೇ ಪಂದ್ಯ: 2015ರಲ್ಲಿ ಇಂಗ್ಲೆಂಡ್​ ವಿರುದ್ಧ (ಪರ್ತ್​): 8 ರನ್​

200ನೇ ಪಂದ್ಯ: 2017ರಲ್ಲಿ ಕಿವೀಸ್​ ವಿರುದ್ಧ (ಮುಂಬೈ): 121 ರನ್​

250ನೇ ಪಂದ್ಯ: 2020ರಲ್ಲಿ ಆಸೀಸ್​ ವಿರುದ್ಧ (ಬೆಂಗಳೂರು): 89 ರನ್​

300ನೇ ಪಂದ್ಯ: 2025ರಲ್ಲಿ ಕಿವೀಸ್​ ವಿರುದ್ಧ (ದುಬೈ): ?