ಕ್ರೀಡೆ

ದಕ್ಷಿಣ ಏಷ್ಯಾ ಜೂನಿಯರ್​ ಅಥ್ಲೆಟಿಕ್ಸ್: ಕನ್ನಡತಿ ಉನ್ನತಿಗೆ ಮತ್ತೊಂದು ಸ್ವರ್ಣ ಪದಕ

ಬೆಂಗಳೂರು: ಕರ್ನಾಟಕದ ಯುವ ಓಟಗಾರ್ತಿ ಉನ್ನತಿ ಅಯ್ಯಪ್ಪ ಚೆನ್ನೈನಲ್ಲಿ ಶುಕ್ರವಾರ ಮುಕ್ತಾಯಗೊಂಡ 4ನೇ ದಕ್ಷಿಣ ಏಷ್ಯಾ ಜೂನಿಯರ್​ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ 2ನೇ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಗುರುವಾರವಷ್ಟೇ ಮಹಿಳೆಯರ 100 ಮೀ. ಹರ್ಡಲ್ಸ್​ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದ ಉನ್ನತಿ, ಶುಕ್ರವಾರ ನಡೆದ 200 ಮೀ. ಓಟದಲ್ಲೂ ದಾಖಲೆಯೊಂದಿಗೆ ಸ್ವರ್ಣಕ್ಕೆ ಕೊರಳೊಡ್ಡಿದರು.

ಉನ್ನತಿ 23.91 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ 2013ರಲ್ಲಿ ಸುಸೀಂದ್ರನ್​ 24.32 ಸೆಕೆಂಡ್​ಗಳಲ್ಲಿ ಓಡಿ ನಿರ್ಮಿಸಿದ್ದ ಕೂಟದಾಖಲೆ ಅಳಿಸಿದರು. ಈ ಸ್ಪರ್ಧೆಯಲ್ಲಿ ಎಲ್ಲ 3 ಪದಕ ಭಾರತದ ಪಾಲಾಯಿತು. ನ್ಯಾನ್ಸಿ ಬೆಳ್ಳಿ ಮತ್ತು ನೀರು ಪಾಠಕ್​ ಕಂಚು ಒಲಿಸಿಕೊಂಡರು.

ಕರ್ನಾಟಕದ ನೋಯೆಲ್​ ಕಾರ್ನೆಲಿಯೊ ಮತ್ತು ಸುಧೀಕ್ಷಾ ವಿ. ಒಳಗೊಂಡ ಭಾರತದ ಮಹಿಳೆಯರ 4/100 ಮೀ. ರಿಲೇ ತಂಡವೂ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿತು. 45.08 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ 2018ರಲ್ಲಿ ಕೊಲಂಬೊದಲ್ಲಿ ದಾಖಲಾಗಿದ್ದ 46.23 ಸೆಕೆಂಡ್​ಗಳ ದಾಖಲೆ ಮುರಿಯಿತು.

ಆತಿಥೇಯ ಭಾರತ ತಂಡ ಈ ಕ್ರೀಡಾಕೂಟದಲ್ಲಿ 21 ಚಿನ್ನ, 22 ಬೆಳ್ಳಿ 5 ಕಂಚಿನ ಸಹಿತ 48 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಸಮಗ್ರ ಚಾಂಪಿಯನ್​ ಪಟ್ಟ ಅಲಂಕರಿಸಿತು.