ಜೊಹಾನ್ಸ್ರ್ಬಗ್: ಪ್ರವಾಸಿ ಭಾರತ ತಂಡದ ವಿರುದ್ಧ ನವೆಂಬರ್ 8ರಿಂದ ನಡೆಯಲಿರುವ 4 ಪಂದ್ಯಗಳ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಗುರುವಾರ ಪ್ರಕಟಗೊಂಡಿದ್ದು, ಎಡಗೈ ವೇಗಿ ಮಾಕೋರ್ ಜಾನ್ಸೆನ್ ಮತ್ತು ವೇಗಿ ಗೆರಾಲ್ಡ್ ಕೋಟ್ಜೀ ವಿಶ್ರಾಂತಿಯ ಬಳಿಕ ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಮಿಹ್ಲಾಲಿ ಎಂಪೊಂಗ್ವಾನಾ ಮತ್ತು ಆಂಡಿಲ್ ಸಿಮೆಲೇನ್ ತಂಡದಲ್ಲಿರುವ ಹೊಸಮುಖಗಳಾಗಿದ್ದಾರೆ.
ಸರಣಿಯ ಮೊದಲ ಪಂದ್ಯ ಡರ್ಬನ್ನಲ್ಲಿ ನಡೆಯಲಿದ್ದು, ನಂತರದ 3 ಪಂದ್ಯಗಳು ಗೆರ್ಬಹ (ನ.10), ಸೆಂಚುರಿಯನ್ (ನ.12) ಮತ್ತು ಜೊಹಾನ್ಸ್ರ್ಬಗ್ನಲ್ಲಿ (ನ.15) ನಡೆಯಲಿದೆ. ದಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಕಾರ್ಯದೊತ್ತಡ ನಿರ್ವಹಣಾ ನಿಯಮಾವಳಿ ಅನ್ವಯ, ಜಾನ್ಸೆನ್ ಮತ್ತು ಕೋಟ್ಜೀ ಟಿ20 ವಿಶ್ವಕಪ್ ನಂತರದಲ್ಲಿ ವಿಶ್ರಾಂತಿಯಲ್ಲಿದ್ದರು. ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆಯಲ್ಲಿರುವ ಕಾರಣ ಮತ್ತೋರ್ವ ವೇಗಿ ಲುಂಗಿ ಎನ್ಗಿಡಿ ಅವರನ್ನು ತಂಡಕ್ಕೆ ಪರಿಗಣಿಸಲಾಗಿಲ್ಲ.
ಅನುಭವಿ ವೇಗಿ ಆನ್ರಿಚ್ ನೋಕಿಯಾ ಮತ್ತು ಸ್ಪಿನ್ನರ್ ತಬರೇಜ್ ಶಮ್ಸಿ ದ. ಆಫ್ರಿಕಾ ಕ್ರಿಕೆಟ್ ಮಂಡಳಿಯ ವಾರ್ಷಿಕ ಗುತ್ತಿಗೆಯಿಂದ ಹೊರಗುಳಿದಿರುವುದರಿಂದ, ಆಯ್ಕೆಗೆ ಪರಿಗಣಿಸಲ್ಪಟ್ಟಿಲ್ಲ. ಏಡನ್ ಮಾರ್ಕ್ರಮ್ ಸಾರಥ್ಯದ 16 ಆಟಗಾರರ ತಂಡದಲ್ಲಿ ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್ ಮತ್ತು ಕೇಶವ್ ಮಹಾರಾಜ್ ಪ್ರಮುಖ ಆಟಗಾರರಾಗಿದ್ದಾರೆ. ವೇಗಿ ಕಗಿಸೊ ರಬಾಡಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ದ. ಆಫ್ರಿಕಾ ಟಿ20 ತಂಡ: ಏಡನ್ ಮಾರ್ಕ್ರಮ್ (ನಾಯಕ), ಒಟ್ನೀಲ್ ಬಾರ್ಟ್ಮನ್, ಗೆರಾಲ್ಡ್ ಕೋಟ್ಜೀ, ಡೊನೊವನ್ ಫೆರೇರ, ರೀಜಾ ಹೆಂಡ್ರಿಕ್ಸ್, ಮಾಕೋರ್ ಜಾನ್ಸೆನ್, ಹೆನ್ರಿಕ್ ಕ್ಲಾಸೆನ್, ಪ್ಯಾಟ್ರಿಕ್ ಕ್ರುಗರ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹ್ಲಾಲಿ ಎಂಪೊಂಗ್ವಾನಾ, ಆಂಡಿಲ್ ಸಿಮೆಲೇನ್, ನಬ ಪೀಟರ್, ರ್ಯಾನ್ ರಿಕೆಲ್ಟನ್, ಲುಥೊ ಸಿಪಮ್ಲಾ, ಟ್ರಿಸ್ಟಾನ್ ಸ್ಟಬ್ಸ್.