ಜೊಹಾನ್ಸ್ರ್ಬಗ್: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ಅನುಭವಿ ಎಡಗೈ ಬ್ಯಾಟರ್ ಡೀನ್ ಎಲ್ಗರ್ ಮಂಗಳವಾರದಿಂದ ನಡೆಯಲಿರುವ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯ ನಂತರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ.
2012ರಲ್ಲಿ ಪದಾರ್ಪಣೆ ಮಾಡಿದ್ದ ಎಲ್ಗರ್ ಇದುವರೆಗೆ 84 ಟೆಸ್ಟ್ ಆಡಿದ್ದು, 13 ಶತಕ ಮತ್ತು 23 ಅರ್ಧಶತಕಗಳ ಸಹಿತ 37.28ರ ಸರಾಸರಿಯಲ್ಲಿ 5,146 ರನ್ ಬಾರಿಸಿದ್ದಾರೆ. 36 ವರ್ಷದ ಎಲ್ಗರ್ ದಕ್ಷಿಣ ಆಫ್ರಿಕಾ ಪರ 8 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. 2018ರಲ್ಲಿ ಕೊನೆಯದಾಗಿ ಅವರು ಏಕದಿನ ಪಂದ್ಯ ಆಡಿದ್ದರು.
"12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಗೌರವವನ್ನು ನಾನು ಕನಸಿನಲ್ಲೂ ಯೋಚಿಸಿರಲಿಲ್ಲ. ಇದೊಂದು ಅಮೋ ಪ್ರಯಾಣ. ಇದು ನನ್ನ ಭಾಗ್ಯ. ಆದರೆ ಎಲ್ಲ ಒಳ್ಳೆಯ ವಿಷಯವೂ ಕೊನೆ ಕಾಣಲೇಬೇಕು. ಭಾರತ ವಿರುದ್ಧದ ತವರಿನ ಸರಣಿ ನನ್ನ ಪಾಲಿಗೆ ಕೊನೆಯದಾಗಿರುತ್ತದೆ. ನಮ್ಮ ಈ ಸುಂದರ ಆಟದಿಂದ ನಿವೃತ್ತಿ ಹೊಂದುವ ನಿರ್ಧಾರವನ್ನು ನಾನು ಈಗಾಗಲೆ ಕೈಗೊಂಡಿದ್ದೇನೆ' ಎಂದು ಎಲ್ಗರ್ ಹೇಳಿದ್ದಾರೆ. ಜನವರಿ 3ರಿಂದ 7ರವರೆಗೆ ಕೇಪ್ಟೌನ್ನಲ್ಲಿ ನಡೆಯಲಿರುವ ಟೆಸ್ಟ್ ಎಲ್ಗರ್ ಪಾಲಿಗೆ ಕೊನೆಯದಾಗಿರುತ್ತದೆ.
"ಕೇಪ್ಟೌನ್ ವಿಶ್ವದಲ್ಲೇ ನನ್ನ ನೆಚ್ಚಿನ ಸ್ಟೇಡಿಯಂ. ನ್ಯೂಜಿಲೆಂಡ್ ಎದುರು ಅಲ್ಲೇ ನನ್ನ ಮೊದಲ ಟೆಸ್ಟ್ ಶತಕ ಸಿಡಿಸಿದ್ದೆ. ಅಲ್ಲೇ ನನ್ನ ಕೊನೆಯ ಟೆಸ್ಟ್ ಆಡುತ್ತಿರುವುದು ಖುಷಿಯ ವಿಚಾರ' ಎಂದು ಎಲ್ಗರ್ ಹೇಳಿದ್ದಾರೆ. ನಾಯಕರಾಗಿ 17 ಟೆಸ್ಟ್ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿರುವ ಅವರು 9 ಜಯ, 7 ಸೋಲು ಮತ್ತು 1 ಡ್ರಾ ಕಂಡಿದ್ದಾರೆ.