ನವದೆಹಲಿ: ಜೂನ್ 29ರಂದು ಮುಕ್ತಾಯಗೊಂಡ 09ನೇ 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 07 ರನ್‌ಗಳ ಜಯ ಸಾಧಿಸಿ ಚುಟುಕು ವಿಶ್ವಸಮರದಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೀಮ್ ಇಂಡಿಯಾ ಯಶಸ್ಸಿನಲ್ಲಿ ಬೌಲರ್ಗಳೊಂದಿಗೆ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ನಲ್ಲಿ ಹಿಡಿದ ಆ ಕ್ಯಾಚ್ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಕ್ಯಾಚ್ನ ಸುತ್ತ ವಿವಾದ ಸುತ್ತುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್ ನೀಡಿದ ಭಾರತದ ಬೌಲರ್ಗಳು ದಿಟ್ಟ ಪ್ರತಿರೋಧ ತೋರಿದರು. ಈ ವೇಳೆ ಅಪಾಯಕಾರಿಯಾಗಿದ್ದ ಹೆನ್ರಿಚ್ ಕ್ಲಾಸೆನ್ಗೆ (52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಹಾರ್ದಿಕ್ ಪಾಂಡ್ಯ ಡಗೌಟ್ ದಾರಿ ತೋರಿಸಿದರು.
ವಾಸ್ತವವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ತಪ್ಪು ಮಾಡಿದ್ದರೆ ವಿಶ್ವಕಪ್ ಕನಸು ಭಗ್ನವಾಗುತ್ತಿತ್ತು. ಸೂರ್ಯ ಅವರ ಈ ಅದ್ಬುತ ಫೀಲ್ಡಿಂಗ್‌ಗೆ ದೇಶದ ಕ್ರಿಕೆಟ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಈ ಕ್ಯಾಚ್ನ ಸುತ್ತ ವಿವಾದದ ಹುತ್ತವೇ ನಿರ್ಮಾಣವಾಗಿದ್ದು, ಪಂದ್ಯ ಮುಗಿದು ಭಾರತ ತಂಡ ಕಪ್ ಗೆದ್ದು ಸಂಭ್ರಮಾಚರಿಸಿ ಎರಡು ತಿಂಗಳಾಗುತ್ತ ಬಂದರೂ ಈ ಬಗ್ಗೆ ಇನ್ನೂ ಚರ್ಚೆ ನಿಂತಿಲ್ಲ. ಇದೀಗ ಈ ಕ್ಯಾಚ್ನ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ತರ್ಬೇಜ್ ಶಂಸಿ ಮಾತನಾಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ತರ್ಬ್ರೇಜ್ ಶಂಸಿ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ವಿಶ್ವಕಪ್ ಫೈನಲ್‌ನಲ್ಲಿ ಕ್ಯಾಚ್ ಅನ್ನು ಪರಿಶೀಲಿಸಲು ಅವರು ಈ ವಿಧಾನವನ್ನು ಬಳಸಿದರೆ ಬಹುಶಃ ಅದು ನಾಟೌಟ್ ಆಗಿರುತಿತ್ತು ಎಂದು ಬರೆದುಕೊಂಡಿದ್ದಾರೆ. ನಮಗೆ ಮೋಸ ಆಗಿದೆ. ಭಾರತ ಮೋಸದಿಂದ ಪಂದ್ಯ ಗೆದ್ದಿದೆ ಎಂದಿದ್ದಾರೆ. ಈ ಪೋಸ್ಟ್ ಇದೀಗ ವಿವಾದವನ್ನು ಸೃಷ್ಟಿಸಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.