ಕ್ರೀಡೆ

ನೀವು ಹಾಕಿಕೊಟ್ಟ ಅಡಿಪಾಯ… 52ನೇ ವಸಂತಕ್ಕೆ ಕಾಲಿಟ್ಟ 'ದಾದಾ'ಗೆ ಜನ್ಮದಿನದ ಸಂಭ್ರಮ

ನವದೆಹಲಿ: ಇಂದು ತಮ್ಮ 52ನೇ ವಸಂತಕ್ಕೆ ಕಾಲಿಟ್ಟ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ದಿಗ್ಗಜ ಸೌರವ್ ಗಂಗೂಲಿ ಅವರಿಗೆ ಕ್ರಿಕೆಟ್ ಅಭಿಮಾನಿಗಳಿಂದ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿಬರುತ್ತಿವೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಮನೋಜ್ ತಿವಾರಿ, ಮುನಾಫ್ ಪಟೇಲ್ ಸೇರಿದಂತೆ ಅನೇಕರು ಗಂಗೂಲಿ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾದ ಸೌರವ್ ಗಂಗೂಲಿ ಇಂದು ಭಾರತೀಯ ಕ್ರಿಕೆಟ್ ತಲುಪಿರುವ ಸ್ಥಾನಮಾನಕ್ಕೆ ಬಹುಪಾಲು ಕೊಡುಗೆ ನೀಡಿದ್ದಾರೆ ಎಂದರೆ ತಪ್ಪಾಗಲಾರದು. 2002ರಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದುಕೊಟ್ಟ ದಾದಾ, 2003ರಲ್ಲಿ ಭಾರತವನ್ನು ಫೈನಲ್​ವರೆಗೂ ಕೊಂಡೊಯ್ಯುವಲ್ಲಿ ಅದ್ಭುತ ನಾಯಕತ್ವ ವಹಿಸಿದ್ದರು. ಇಂದು ಅವರ 52ನೇ ಜನ್ಮದಿನಕ್ಕೆ ಸಿನಿ ತಾರೆಯರಿಂದ ಹಿಡಿದು ಗಣ್ಯರು ಶುಭಕೋರಿದ್ದಾರೆ.

'ನೀವೆಂದಿಗೂ ನಮ್ಮ ದಾದಾ. ಟೀಮ್ ಇಂಡಿಯಾಗೆ ನೀವು ಕೊಟ್ಟ ಕೊಡುಗೆ ಅವಿಸ್ಮರಣಿಯ'. 'ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದ್ದ ನಿಮಗೆ ಜನ್ಮದಿನದ ಶುಭಾಶಯಗಳು' ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾಗೂ ಕ್ರಿಕೆಟಿಗರು ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.