ನವದೆಹಲಿ: ಏಕದಿನ ವಿಶ್ವಕಪ್ 2023ರ ಅಂತಿಮ ಹಣಾಹಣಿಯು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯಲಿದ್ದು, ಈಗಾಗಲೇ ಕ್ಷಣಗಣನೇ ಆರಂಭಗೊಂಡಿದೆ. ಇಂದು ಮಧ್ಯಾಹ್ನ 2:00 ಗಂಟೆಗೆ ಪ್ರಾರಂಭವಾಗುವ ನೇರಪ್ರಸಾರ ವೀಕ್ಷಿಸಲು ಇಡೀ ಜಗತ್ತೇ ತೀವ್ರ ಕಾತರದಿಂದ ಕಾಯುತ್ತಿದೆ. ಈ ನಡುವೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕಿರು ವಿಡಿಯೋ ಮೂಲಕ ಟೀಮ್ ಇಂಡಿಯಾ ಗೆದ್ದು ಬರುವಂತೆ ಶುಭಹಾರೈಸಿದ್ದಾರೆ.
ರಾಜಕೀಯ ನಾಯಕರು ಸೇರಿದಂತೆ ಅನೇಕ ಸೆಲೆಬ್ರೆಟಿಗಳು ವ್ಯಾಪಕವಾಗಿ ಶುಭಹಾರೈಸುತ್ತಿರುವ ಹಿನ್ನೆಲೆ ಇದೀಗ ಸೋನಿಯಾ ಗಾಂಧಿ ಅವರು ಕೂಡ ಭಾರತ ತಂಡ ವಿಶ್ವಕಪ್‌ನಲ್ಲಿ ನಡೆದುಬಂದ ಹಾದಿಯನ್ನು ನೆನದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
"ಆತ್ಮೀಯ ಟೀಮ್ ಇಂಡಿಯಾ, ಈ ವಿಶ್ವಕಪ್‌ನಲ್ಲಿ ನಿಮ್ಮ ಅದ್ಭುತ ಪ್ರದರ್ಶನ ಮತ್ತು ತಂಡದ ಅತ್ಯುತ್ತಮ ಕೆಲಸಕ್ಕಾಗಿ ನಾನು ಮೊದಲು ನಿಮ್ಮನ್ನು ಅಭಿನಂದಿಸುವ ಮೂಲಕ ಪ್ರಾರಂಭಿಸಲು ಬಯಸುತ್ತೇನೆ. ನೀವು ನಿರಂತರವಾಗಿ ದೇಶಕ್ಕೆ ಕೀರ್ತಿ ತಂದಿದ್ದೀರಿ ಮತ್ತು ನಾವು ಸಂತೋಷ ಮತ್ತು ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ಹೇಳಿದರು.
ಇದನ್ನೂ ಓದಿ: IND vs AUS, CWC 2023 Final: ಫೈನಲ್ ಪಂದ್ಯಕ್ಕೆ ಕ್ಷಣಗಣನೆ; ಯಾರೆಲ್ಲಾ ಗಣ್ಯರು ಆಗಮಿಸಲಿದ್ದಾರೆ? ಇಲ್ಲಿದೆ ವಿವರ!
"ಈಗ ನೀವು ಫೈನಲ್‌ಗೆ ಸಿದ್ಧರಾಗುತ್ತಿದ್ದಂತೆ, ಇಡೀ ದೇಶವು ನಿಮ್ಮ ಗೆಲುವಿಗಾಗಿ ಕಾಯುತ್ತಿದೆ. ಫೈನಲ್‌ಗೆ ಭಾರತ ತಂಡದ ಹಾದಿಯು ಸ್ಪೂರ್ತಿದಾಯಕವಾಗಿರುವುದು ಮಾತ್ರವಲ್ಲದೆ ಕ್ರಿಕೆಟ್ ಮೈದಾನದ ಗಡಿಗಳನ್ನು ಮೀರಿ ತಲುಪುವ ಅಮೂಲ್ಯವಾದ ಪಾಠಗಳನ್ನು ಸಹ ಹೊಂದಿದೆ. ಈ ಪಾಠಗಳು ಏಕತೆ, ಕಠಿಣ ಪರಿಶ್ರಮ, ನಿರ್ಣಯ ಮತ್ತು ನಿಮ್ಮಲ್ಲಿ ಅಚಲವಾದ ನಂಬಿಕೆ" ತಿಳಿಸುತ್ತದೆ ಎಂದು ಹೇಳಿದರು.
ಭಾರತವು ವಿಶ್ವಕಪ್ ಟ್ರೋಫಿಯನ್ನು ಮೊದಲ ಬಾರಿಗೆ 1983 ರಲ್ಲಿ ಮತ್ತು ನಂತರ 2011 ರಲ್ಲಿ ಪಡೆದುಕೊಂಡಿತ್ತು. ಅದೇ ರೀತಿ ಈ ಬಾರಿಯೂ ಕೂಡ ಗೆದ್ದು ಬರಲಿ ಎಂದು ಆಶಿಸುತ್ತೇನೆ ಎಂದು ವಿಡಿಯೋ ಮೂಲಕ ಟೀಮ್ ಇಂಡಿಯಾಗೆ ಶುಭಹಾರೈಸಿದ್ದಾರೆ,(ಏಜೆನ್ಸೀಸ್).