ಕ್ರೀಡೆ

ಸಿಕ್ಸ್​ ಪ್ಯಾಕ್ ಅವತಾರದಲ್ಲಿ ಸ್ಮೃತಿ ಮಂಧಾನ: ವೈರಲ್​ ಫೋಟೋ ಹಿಂದಿನ ಅಸಲಿಯತ್ತು ಇಲ್ಲಿದೆ... Smriti Mandhana

ನವದೆಹಲಿ: ಭಾರತದ ಮಹಿಳಾ ಕ್ರಿಕೆಟ್​ ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ( Smriti Mandhana ) ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಏಕಂದರೆ, ತನ್ನ ಕ್ರಿಕೆಟ್​ ಪ್ರತಿಭೆಯಿಂದ ಮಾತ್ರವಲ್ಲ, ಸೌಂದರ್ಯದಿಂದಲೂ ಭಾರಿ ಸುದ್ದಿಯಾಗಿದ್ದಾರೆ. ಅವರ ಕ್ರಿಕೆಟ್​ ಆಟಕ್ಕೆ ಎಷ್ಟು ಅಭಿಮಾನಿಗಳಿದ್ದಾರೋ ಅಷ್ಟೇ ಅಭಿಮಾನಿಗಳು ಅವರ ಸೌಂದರ್ಯಕ್ಕೂ ಇದಾರೆ.

ಅಂದಹಾಗೆ, ಸ್ಮೃತಿ ಮಂಧಾನ ಅವರು ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಆಡುತ್ತಿದ್ದಾರೆ. ಈ ಪಂದ್ಯಗಳು ಪ್ರಸ್ತುತ ವಿಶಾಖಪಟ್ಟಣದಲ್ಲಿ ನಡೆಯುತ್ತಿವೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಂಧಾನ ಅವರು 66 ಎಸೆತಗಳಲ್ಲಿ 80 ರನ್ ಗಳಿಸಿ ಮಿಂಚಿದರು. ಆದರೆ, ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋಲುಂಡಿತು. ಆದಾಗ್ಯೂ, ಮಂಧಾನ ಅವರು ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ವರ್ಷ ಸಾವಿರ ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್​ವುಮನ್ ಎಂಬ ದಾಖಲೆಯನ್ನು ಮಂಧಾನ ನಿರ್ಮಿಸಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಬ್ಯಾಟ್ಸ್​ವುಮನ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಐದು ಅಥವಾ ಅದಕ್ಕಿಂತ ಹೆಚ್ಚು 50+ ಸ್ಕೋರ್‌ಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ವುಮನ್ ಎಂಬ ದಾಖಲೆಯನ್ನು ಮಂಧಾನ ಸಾಧಿಸಿದ್ದಾರೆ. ಇದೀಗ ಕ್ರಿಕೆಟ್​ ಹೊರತಾಗಿ ಬೇರೊಂದು ಕಾರಣಕ್ಕೆ ಮಂಧಾನ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದಾರೆ.

ಹೌದು, ಸಿಕ್ಸ್ ಪ್ಯಾಕ್‌ ಹೊಂದಿರುವ ಸ್ಮೃತಿ ಮಂಧಾನ ಅವರ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದನ್ನು ನೋಡಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕೊಹ್ಲಿಯಂತೆ ಮಂಧಾನ ಕೂಡ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ ಎಂದು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಆದರೆ, ಕೆಲವರು ವೈರಲ್​ ಫೋಟೋದ ನಿಜಾಂಶದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಂದರೆ, ಅದೊಂದು ಎಐ ಜನರೇಟೆಡ್​ ಫೋಟೋ ಎಂದು ಹೇಳುತ್ತಿದ್ದಾರೆ.

ಹೌದು, ಸ್ಮೃತಿ ಮಂಧಾನ ಅವರ ಸಿಕ್ಸ್​ ಪ್ಯಾಕ್​ ಫೋಟೋ ನಕಲಿ. ಅಭ್ಯಾಸದ ಸಮಯದಲ್ಲಿ ತುಂಬಾ ದಣಿದಿರುವ ಮಂಧಾನ ತಮ್ಮ ಟಿ-ಶರ್ಟ್ ಅನ್ನು ಮೇಲಕ್ಕೆ ಎತ್ತಿ ಮುಖ ಒರೆಸುತ್ತಿರುವ ಫೋಟೋದಲ್ಲಿ, ಅವರ ಹೊಟ್ಟೆಯ ಮೇಲಿನ ಸ್ನಾಯುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದನ್ನು ನೋಡಿದ ನಂತರ, ಕೆಲವು ನೆಟ್ಟಿಗರು ಮಂಧಾನ ಅವರಿಗೆ 'ಸಿಕ್ಸ್ ಪ್ಯಾಕ್' ಇದೆ ಎಂದು ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ವೈರಲ್ ಆಗುತ್ತಿರುವ ಈ ಫೋಟೋ ನಕಲಿ ಎಂದು ತಿಳಿದುಬಂದಿದೆ.

ಈ ಫೋಟೋವನ್ನು ಕೃತಕ ಬುದ್ಧಿಮತ್ತೆ (ಎಐ) ಯಿಂದ ಮಾಡಲಾಗಿದೆ. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸುಲಭವಾಗಿ ಕಾಣುತ್ತದೆ. ಅಭ್ಯಾಸ ಮಾಡುತ್ತಿರುವ ಫೋಟೋಗೂ ಸಿಕ್ಸ್​ ಪ್ಯಾಕ್​ ಇರುವ ಫೋಟೋ ಗುಣಮಟ್ಟದಲ್ಲಿ ತುಂಬಾ ವ್ಯತ್ಯಾಸವಿದೆ. ಹೀಗಾಗಿ ಅದೊಂದು ನಕಲಿ ಫೋಟೋ ಎನ್ನಬಹುದು. ಇನ್ನು ಮಂಧಾನ ಅವರಿಗೆ ಯಾವುದೇ ಸಿಕ್ಸ್​ ಪ್ಯಾಕ್​ ಇಲ್ಲ. ಆದರೆ, ಆಟಕ್ಕಾಗಿ ತಮ್ಮ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. (ಏಜೆನ್ಸೀಸ್​)