ಕ್ರೀಡೆ

ಕ್ರಿಕೆಟ್​ ಮಂಡಳಿ ವಿರುದ್ಧವೇ ಮುನಿಸಿಕೊಂಡ ಶ್ರೀಲಂಕಾ ಕ್ರಿಕೆಟಿಗರು..

ಕೊಲಂಬೊ: ಶ್ರೀಲಂಕಾದಲ್ಲಿ ಕ್ರಿಕೆಟಿಗರ ಹಾಗೂ ಕ್ರಿಕೆಟ್​ ಮಂಡಳಿ ವಿರುದ್ಧದ ಕದನ ಮತ್ತೊಮ್ಮೆ ಶುರುವಾಗಿದೆ. ಟೆಸ್ಟ್​ ತಂಡದ ನಾಯಕ ದಿಮುತ್​ ಕರುಣರತ್ನೆ, ದಿನೇಶ್​ ಚಾಂಡಿಮಾಲ್​, ಏಂಜಲೊ ಮ್ಯಾಥ್ಯೂಸ್​ ಸೇರಿದಂತೆ ಹಿರಿಯ ಕ್ರಿಕೆಟಿಗರು ನೂತನ ಗುತ್ತಿಗೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ, ಗುತ್ತಿಗೆ ಒಪ್ಪಂದ ಮೊತ್ತ ತುಂಬಾ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಕ್ರಿಕೆಟಿಗರು ಈ ನಿರ್ಧಾರ ಕೈಗೊಂಡಿದ್ದಾರೆ. ಆಟಗಾರರು ಹಾಗೂ ಎಸ್​ಎಲ್​ಸಿ ನಡುವಿನ ತಿಕ್ಕಾಟದಿಂದಾಗಿ ಜುಲೈನಲ್ಲಿ ನಿಗದಿಯಾಗಿರುವ ಭಾರತ ವಿರುದ್ಧದ ದ್ವಿಪಕ್ಷೀಯ ಸರಣಿ ತೂಗುಯ್ಯಾಲೆಯಲ್ಲಿ ಸಿಲುಕಿದೆ.

ನೂತನ ಗುತ್ತಿಗೆ ಕುರಿತು ಮಾತನಾಡಿದ, ದಿಮುತ್​ ಕರುಣರತ್ನೆ, ದಿನೇಶ್​ ಚಾಂಡಿಮಾಲ್​, ಏಂಜಲೊ ಮ್ಯಾಥ್ಯೂಸ್​ ಇತರ ದೇಶಗಳಿಗೆ ಗುತ್ತಿಗೆ ಮೊತ್ತಕ್ಕೆ ನೋಡಿದರೆ ಮೂರನೇ ಒಂದು ಭಾಗದಷ್ಟು ಇಲ್ಲ ಎಂದು ಕಿಡಿಕಾರಿದ್ದಾರೆ. 24 ಕ್ರಿಕೆಟಿಗರನ್ನು 4 ಗ್ರೇಡ್​ನಲ್ಲಿ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಮುಂದಾಗಿದೆ. ಗುತ್ತಿಗೆ ಒಪ್ಪಂದಕ್ಕೆ ಸಹಿಹಾಕಲು ಜೂನ್​ 3ರವರೆಗೆ ಗಡುವು ನೀಡಲಾಗಿದೆ. ಎ ಗ್ರೇಡ್​ನ 6 ಆಟಗಾರರಿಗೆ ವಾರ್ಷಿಕ 70 ಸಾವಿರ ಯುಎಸ್​ ಡಾಲರ್​ನಿಂದ ಒಂದು ಲ ಯುಎಸ್​ ಡಾಲರ್​ವರೆಗೆ (51 ಲಕ್ಷ ರೂ ಯಿಂದ 72 ಲಕ್ಷ ರೂ) ಮೊತ್ತ ನಿಗದಿಪಡಿಸಲಾಗಿದೆ. ಇದು ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ಆಟಗಾರರಿಗೆ ಸಿ ಗ್ರೇಡ್​ನಲ್ಲಿ (ವಾರ್ಷಿಕ 1 ಕೋಟಿ) ದಕ್ಕುವ ಮೊತ್ತಕ್ಕಿಂತ ಕಡಿಮೆಯಾಗಿದೆ.

ಶ್ರೀಲಂಕಾ ಕ್ರಿಕೆಟ್​ ಮಂಡಳಿ ವಿರುದ್ಧ ಆಟಗಾರರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಸಹಿಹಾಕುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಇದೀಗ ಎಸ್​ಎಲ್​ಸಿ ಹಾಗೂ ಆಟಗಾರರ ನಡುವೆ ಹೊಸ ಬಿಕ್ಕಟ್ಟಿಗೆ ಕಾರಣವಾಗಿದೆ.