ಕ್ರೀಡೆ

ವಿಶ್ವ ಚೆಸ್​ ಚಾಂಪಿಯನ್​ ಗುಕೇಶ್​ಗೆ ದುಬಾರಿ ಉಡುಗೊರೆ​ ಕೊಟ್ಟ ನಟ ಶಿವಕಾರ್ತಿಕೇಯನ್​! Gukesh Dommaraju

Gukesh Dommaraju : ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್​ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಯುವ ಆಟಗಾರ ಡಿ. ಗುಕೇಶ್​ಗೆ ಕಾಲಿವುಡ್​ ಸೂಪರ್​​ಸ್ಟಾರ್​ ಶಿವಕಾರ್ತಿಕೇಯನ್​ ದುಬಾರಿ ಉಡುಗೊರೆಯನ್ನು ನೀಡಿ ಗೌರವಿಸಿದ್ದಾರೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್​ನಲ್ಲಿ ಚೀನಾದ ಡಿಂಗ್​ ಲಿರೆನ್​ ವಿರುದ್ಧ ತಮಿಳುನಾಡಿನ ಗುಕೇಶ್​ ಸ್ಫರ್ಧಿಸಿದರು. ಒಟ್ಟು 14 ಸುತ್ತುಗಳಲ್ಲಿ ಗುಕೇಶ್​ ಮತ್ತು ಡಿಂಗ್ ಲಿರೆನ್ ತಲಾ 2 ಗೆಲುವು ಸಾಧಿಸಿದರೆ, ಇತರ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡವು. ಇದರಿಂದಾಗಿ ಇಬ್ಬರೂ ತಲಾ 6.5 ಅಂಕ ಗಳಿಸಿದರು. 14ನೇ ಸುತ್ತಿನ ಕೊನೆಯ ಪಂದ್ಯದಲ್ಲಿ ಗುಕೇಶ್ ಅದ್ಭುತ ಗೆಲುವು ಸಾಧಿಸಿದರು.

ಈ ಗೆಲುವಿನ ನಂತರ ಗುಕೇಶ್ 11.45 ಕೋಟಿ ಬಹುಮಾನ ಪಡೆದಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಗುಕೇಶ್‌ಗೆ 5 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇದೇ ಸಂದರ್ಭದಲ್ಲಿ ನಟ ಶಿವಕಾರ್ತಿಕೇಯನ್ ಅವರು ಗುಕೇಶ್ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಕೇಕ್ ಕತ್ತರಿಸಿ ಅಭಿನಂದಿಸಿದ್ದಾರೆ. ದುಬಾರಿ ಬೆಲೆಯ ವಾಚ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ, ಗುಕೇಶ್​ ಆರಂಭದಿಂದಲೇ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದರು. ಆದರೆ ಅವರ ಆಕ್ರಮಣಕಾರಿ ಆಟಗಳಿಗೆಲ್ಲ ಚೀನಾದ ಡಿಂಗ್​ ಲಿರೆನ್​ ದಿಟ್ಟ ತಿರುಗೇಟು ನೀಡುವ 14ನೇ ಹಾಗೂ ಕೊನೇ ಪಂದ್ಯದವರೆಗೂ ಸ್ಪರ್ಧೆಯನ್ನು ಎಳೆದರು. ಕೊನೆಗೂ ಲಿರೆನ್​ ಕೊನೇ ಪಂದ್ಯದಲ್ಲಿ ಮಾಡಿದ ದೊಡ್ಡ ಎಡವಟ್ಟಿನ ನಡೆಯೊಂದು ಗುಕೇಶ್​ ಅತಿಕಿರಿಯ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮುವಂತೆ ಮಾಡಿತು.

ಬಿಳಿ ಕಾಯಿಯೊಂದಿಗೆ ಕೊನೇ ಪಂದ್ಯ ಆಡಿದ ಲಿರೆನ್​ ಗೆಲುವಿಗೆ ಹೆಚ್ಚಿನ ಅವಕಾಶ ಹೊಂದಿದ್ದರು. ಹಿಂದಿನ 2 ಪಂದ್ಯಗಳನ್ನು ಬಿಳಿ ಕಾಯಿಯಲ್ಲೇ ಗೆದ್ದಿದ್ದ ಗುಕೇಶ್​ ಕೂಡ ಕಪ್ಪು ಕಾಯಿಯೊಂದಿಗೆ ಗೆಲ್ಲುವ ಅವಕಾಶ ವಿರಳವಿತ್ತು. ಹೀಗಾಗಿ ಗುಕೇಶ್​ ಡ್ರಾದತ್ತಲೇ ಹೆಚ್ಚಿನ ಒಲವು ಹೊಂದಿದ್ದರು ಮತ್ತು ಮುಖಾಮುಖಿ ಟೈಬ್ರೇಕರ್​ಗೆ ಸಾಗುವುದು ಬಹುತೇಕ ಖಚಿತವೆನಿಸಿತ್ತು. ಆದರೆ ಪಂದ್ಯ 50 ನಡೆಗಳನ್ನು ದಾಟಿದ ಬಳಿಕ 32 ವರ್ಷದ ಲಿರೆನ್​ ಏಕಾಗ್ರತೆಯಲ್ಲಿ ಭಂಗ ಉಂಟಾಗಿ ಚೆಸ್​ ಇತಿಹಾಸದಲ್ಲೇ ಅತಿದೊಡ್ಡ ಎಡವಟ್ಟಿನ ದಾಳ ಪ್ರಯೋಗ ಮಾಡಿ ಸೋಲು ಅನುಭವಿಸುವಂತಾಯಿತು.

ಲಿರೆನ್​ 55ನೇ ನಡೆಯಲ್ಲಿ ತನ್ನ ರೂಕ್​ (ಆನೆ) ದಾಳವನ್ನು ಎಫ್​​4ರಿಂದ ಎಫ್​​2ಕ್ಕೆ ಚಲಿಸಿದರು. ಇದು ಅತಿದೊಡ್ಡ ಎಡವಟ್ಟಿನ ಹೆಜ್ಜೆ ಆಗಿತ್ತು ಮತ್ತು ಗುಕೇಶ್​ಗೆ ಪಂದ್ಯ ಗೆಲ್ಲಲು ವರದಾನವೆನಿಸಿತು. ಲಿರೆನ್​ ಎಫ್​2ಕ್ಕೆ ಇಟ್ಟ ರೂಕ್​ ದಾಳವನ್ನು ಗುಕೇಶ್​ ತನ್ನ ರೂಕ್​ ದಾಳವನ್ನು ಬಲಿಕೊಟ್ಟು ಉರುಳಿಸಿದರು. ಬಳಿಕ ಇಬ್ಬರ ಬಿಷಪ್​ (ರಥ) ದಾಳವೂ ಆಟದಿಂದ ಹೊರಬಿದ್ದಿತು. ಇದರಿಂದ ಬೋರ್ಡ್​ ಮೇಲೆ ಲಿರೆನ್​ರ ಕೇವಲ 2 ದಾಳ ಉಳಿದುಕೊಂಡರೆ, ಗುಕೇಶ್​ 3 ದಾಳ ಹೊಂದಿದ್ದರು. ಅಂದರೆ ಲಿರೆನ್​ ಕಿಂಗ್​ ದಾಳದ ಜತೆಗೆ ಕೇವಲ ಒಂದು ದಾಳ (ಸೈನಿಕ) ಹೊಂದಿದ್ದರೆ, ಗುಕೇಶ್​ ಕಿಂಗ್​ ಜತೆಗೆ 2 ದಾಳ (2 ಸೈನಿಕ) ಹೊಂದಿದ್ದರು. ಇದರಿಂದಾಗಿ ಗುಕೇಶ್​, ಲಿರೆನ್​ಗೆ ಚೆಕ್​ಮೇಟ್​ ನೀಡಿದರು. ಅಲ್ಲದೆ ಓರ್ವ ಸೈನಿಕ ಕೊನೆಯ ಸಾಲಿಗೆ ತಲುಪಿದರೂ ಕ್ವೀನ್​ ಆಗಿ (ರಾಣಿ) ಬಡ್ತಿ ಪಡೆದು ಗುಕೇಶ್​ ಇನ್ನಷ್ಟು ಪ್ರಾಬಲ್ಯ ಸಾಧಿಸುವ ಅವಕಾಶವಿತ್ತು. ಹೀಗಾಗಿ ಲಿರೆನ್​ಗೆ ಬಳಿಕ ಪಂದ್ಯದಲ್ಲಿ ಡ್ರಾ ಸಾಧಿಸುವ ಅಥವಾ ಗೆಲುವು ಸಾಧಿಸುವ ಯಾವ ಅವಕಾಶವೂ ಉಳಿದಿರದ ಕಾರಣ ಅವರು ಗುಕೇಶ್​ ಗೆಲುವನ್ನು ಒಪ್ಪಿಕೊಂಡರು.

ಈ 55ನೇ ನಡೆಯ ಎಡವಟ್ಟು ಓರ್ವ ಸಾಮಾನ್ಯ ಚೆಸ್​ ಆಟಗಾರನೂ ಮಾಡುವಂಥ ತಪ್ಪಲ್ಲ. ಆದರೆ ವಿಶ್ವ ಚಾಂಪಿಯನ್​ಷಿನ್​ನ ನಿರ್ಣಾಯಕ ಪಂದ್ಯದ ಒತ್ತಡದಲ್ಲಿ ಲಿರೆನ್​ ಎಡವಿದರು. ಹೀಗಾಗಿ ಲಿರೆನ್​ ತೀವ್ರ ಟೀಕೆಗಳನ್ನು ಎದುರಿಸುವಂತಾಗಿದೆ. (ಏಜೆನ್ಸೀಸ್)