ಕ್ರೀಡೆ

ಬೆಳಗ್ಗೆ ಎದ್ದ ಕೂಡಲೇ ಫೋನ್‌ನಲ್ಲಿ ಗೂಗಲ್ ಓಪನ್​ ಮಾಡಿ... ಗೆಲುವಿನ ರಹಸ್ಯ ಬಿಚ್ಚಿಟ್ಟ ಸಿರಾಜ್​! Mohammed Siraj

Mohammed Siraj : ಬೆಳಗ್ಗೆ ಎದ್ದ ತಕ್ಷಣ ನಾನು ನನ್ನ ಫೋನ್‌ನಲ್ಲಿ ಗೂಗಲ್ ಅನ್ನು ಓಪನ್​ ಮಾಡಿದೆ. ಅದರಲ್ಲಿ 'ಬಿಲೀವ್' ಎಮೋಜಿಯನ್ನು ನೋಡಿ,  ಸ್ಕ್ರೀನ್​ಶಾಟ್​ ತೆಗೆದುಕೊಂಡು ಅದನ್ನು ವಾಲ್‌ಪೇಪರ್​ನಲ್ಲಿ ಹಾಕಿಕೊಂಡೆ. ಬಳಿಕ ನಾನು ನನ್ನ ದೇಶಕ್ಕಾಗಿ ಖಂಡಿತ ಇದನ್ನು ಮಾಡುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡೆ... ಇದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್​ ಸಿರಾಜ್ ಅವರು ಹೇಳಿದ ಮಾತುಗಳು.

ಓವಲ್‌ನಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಮೊಹಮ್ಮದ್​ ಸಿರಾಜ್ ಪ್ರಮುಖ ಪಾತ್ರ ವಹಿಸಿದರು. ಓವಲ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಸಿರಾಜ್ 30.1 ಓವರ್‌ಗಳಲ್ಲಿ 104 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಲವಾರು ವಿವರಗಳನ್ನು ಬಹಿರಂಗಪಡಿಸಿದರು.

ನಾನು ಯಾವುದೇ ಸಮಯದಲ್ಲಿ ಪಂದ್ಯವನ್ನು ಗೆಲ್ಲಬಲ್ಲೆ ಎಂದು ನಾನು ಯಾವಾಗಲೂ ನಂಬುತ್ತೇನೆ. ಇಂದು (ಆಗಸ್ಟ್​ 04) ಬೆಳಗ್ಗೆಯೂ ನಾನು ಅದನ್ನೇ ಮಾಡಿದೆ. ನನ್ನ ಏಕೈಕ ಪ್ಲ್ಯಾನ್​ ಏನೆಂದರೆ, ಉತ್ತಮ ಲೆಂತ್ ಬೌಲಿಂಗ್ ಮಾಡುವುದು. ನಾನು ವಿಕೆಟ್ ತೆಗೆದುಕೊಳ್ಳುತ್ತೇನೋ ಅಥವಾ ರನ್ ನೀಡುತ್ತೇನೋ ಎಂಬುದು ನನಗೆ ಮುಖ್ಯವಲ್ಲ ಎಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನಂತರದ ದಿನೇಶ್ ಕಾರ್ತಿಕ್‌ ಜತೆ ನಡೆದ ಮಾತುಕತೆಯಲ್ಲಿ ಸಿರಾಜ್​​ ತಿಳಿಸಿದರು.

ಹ್ಯಾರಿ ಬ್ರೂಕ್ 19 ರನ್ ಗಳಿಸಿದ್ದಾಗ ಒಂದು ದೊಡ್ಡ ಹೊಡೆತವನ್ನು ಹೊಡೆದರು ಮತ್ತು ಸಿರಾಜ್ ಅದನ್ನು ಬೌಂಡರಿ ಬಳಿ ಹಿಡಿಯಲು ಪ್ರಯತ್ನಿಸುತ್ತಾ ಬೌಂಡರಿ ಕುಶನ್ ದಾಟಿದರು. ನಂತರ ಬ್ರೂಕ್ ಅದ್ಭುತ ಶತಕ ಗಳಿಸಿದರು. ಪಂದ್ಯವು ಭಾರತದ ಕೈಯಿಂದ ಜಾರಿದಂತೆ ಕಾಣುತ್ತಿತ್ತು. ಈ ವೇಳೆ ಸಿರಾಜ್​ ವಿರುದ್ಧ ಭಾರಿ ಟೀಕೆಗಳು ಕೂಡ ವ್ಯಕ್ತವಾಯಿತು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿರಾಜ್, ಆ ಕ್ಯಾಚ್ ತೆಗೆದುಕೊಳ್ಳುವ ಸಮಯದಲ್ಲಿ ನಾನು ಕುಶನ್‌ಗೆ ಹೊಡೆಯುತ್ತೇನೆಂದು ನನಗೆ ತಿಳಿದಿರಲಿಲ್ಲ. ಅದು ಪಂದ್ಯದ ತಿರುವಾಗಿತ್ತು. ಆದರೆ, ಅವಕಾಶ ಚೆಲ್ಲಿದೆ. ಇದಾದ ಬಳಿಕ ಬ್ರೂಕ್ ಅವರು T20 ಮೋಡ್‌ಗೆ ಹೋಗಿದರು. ಇದರಿಂದ ನಾವು ಪಂದ್ಯದಿಂದ ಹಿಂದೆ ಬಿದ್ದೆವು. ಆದರೆ, ದೇವರಿಗೆ ಧನ್ಯವಾದಗಳು ಎಂದು ಸಿರಾಜ್ ಹೇಳಿದರು.

ಪಂದ್ಯದ ವಿಚಾರಕ್ಕೆ ಬಂದರೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಯನ್ನು ಕಡೆಗೂ ಸಮಬಲಗೊಳಿಸುವಲ್ಲಿ ಭಾರತ ಯಶಸ್ವಿಯಾಯಿತು. ಲಂಡನ್​​ನ ಕೆನ್ನಿಂಗ್ಟನ್ ಓವಲ್​ನಲ್ಲಿ ನಡೆದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್​ ಕ್ಲೈಮ್ಯಾಕ್ಸ್​ ಹಂತವನ್ನು ತಲುಪಿತ್ತು. ಇಂಗ್ಲೆಂಡ್​ಗೆ 35 ರನ್​ಗಳ ಅಗತ್ಯವಿದ್ದರೆ, ಟೀಮ್ ಇಂಡಿಯಾಗೆ 4 ವಿಕೆಟ್​ಗಳು ಬೇಕಿತ್ತು. ಮೂರು ವಿಕೆಟ್​ಗಳನ್ನು ಯಶಸ್ವಿಯಾಗಿ ಕಬಳಿಸಿದ ಗಿಲ್ ಪಡೆಗೆ ಅಚ್ಚರಿ ಮೂಡಿಸಿದ್ದು, ಕ್ರಿಸ್​ ವೋಕ್ಸ್​ ಎಂಟ್ರಿ!

ಕಡೆಯ ದಿನದಾಟದಲ್ಲಿ ಇಂಗ್ಲೆಂಡ್​ನ 4 ವಿಕೆಟ್​ಗಳನ್ನು ಕಬಳಿಸುವಲ್ಲಿ ಗಿಲ್ ಪಡೆ ಮೇಲುಗೈ ಸಾಧಿಸಿತು. ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್​ ಸಿರಾಜ್ ತಲಾ ಎರಡು ವಿಕೆಟ್​ ಪಡೆದರು. ಈ ವೇಳೆ ಕೊನೆಗೆ ಕಣಕ್ಕಿಳಿದ ಇಂಜುರಿಯಿಂದ ಬಳಲುತ್ತಿದ್ದ ಕ್ರಿಸ್​ ವೋಕ್ಸ್​, ಒಂದೇ ಕೈಯಲ್ಲಿ ತಂಡದ ಪರ ಆಡಿದರು. ಆದರೆ, ಗೆಲುವು ತಂದುಕೊಡುವಲ್ಲಿ ವಿಫಲರಾದರು. (ಏಜೆನ್ಸೀಸ್​)