ಕ್ರೀಡೆ

ಆಸ್ಟ್ರೇಲಿಯನ್​ ಓಪನ್ ಸೆಮೀಸ್​ನಲ್ಲಿ ಜೋಕೊವಿಕ್​ಗೆ ಆಘಾತ; ಪ್ರಾಬಲ್ಯಕ್ಕೆ ತೆರೆ ಎಳೆದ ಇಟಲಿ ಆಟಗಾರ

ಮೆಲ್ಬೋರ್ನ್​: ವರ್ಷದ ಮೊದಲ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ಆಸ್ಟ್ರೆಲಿಯನ್​ ಓಪನ್​ನಲ್ಲಿ ದಾಖಲೆಯ 11ನೇ ಬಾರಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದ್ದ ವಿಶ್ವ ನಂ. 1 ತಾರೆ ನೊವಾಕ್​ ಜೋಕೊವಿಕ್​ ಸೆಮಿಫೈನಲ್​ ಹಂತದಲ್ಲಿ ಮುಗ್ಗರಿಸಿದ್ದಾರೆ. ಇಟಲಿಯ ಯುವ ಆಟಗಾರ ಜನ್ನಿಕ್​ ಸಿನ್ನರ್​, ಸೆರ್ಬಿಯಾದ ಅನುಭವಿ ಆಟಗಾರನಿಗೆ ಆಘಾತ ನೀಡಿದ್ದು, ಭಾನುವಾರದ ಫೈನಲ್​ನಲ್ಲಿ ರಷ್ಯಾದ ಡೇನಿಯಲ್​ ಮೆಡ್ವೆಡೇವ್​ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

ರಾಡ್​ ಲೆವರ್​ ಅರೇನಾದಲ್ಲಿ ಶುಕ್ರವಾರ ನಡೆದ ಕಾದಾಟದಲ್ಲಿ 36 ವರ್ಷದ ಜೋಕೊವಿಕ್​ 1-6, 2-6, 7-6, 3-6 ಸೆಟ್​ಗಳಿಂದ 3 ಗಂಟೆ 22 ನಿಮಿಷಗಳಲ್ಲಿ ಸಿನ್ನರ್​ಗೆ ಶರಣಾದರು. 22 ವರ್ಷ ಸಿನ್ನರ್​ 2008ರ ಬಳಿಕ ಮೆಲ್ಬೋರ್ನ್​ ಪಾರ್ಕ್​ನಲ್ಲಿ ಫೈನಲ್​ಗೇರಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರೆ, 10 ಬಾರಿಯ ಚಾಂಪಿಯನ್​ ಹಾಗೂ 24 ಗ್ರಾಂಡ್​ ಸ್ಲಾಂಗಳ ಒಡೆಯ ಜೋಕೊವಿಕ್​ 2018ರ ಬಳಿಕ ಮೊದಲ ಬಾರಿ ಇಲ್ಲಿ ಸೋಲು ಕಂಡರು. ಮೆಲ್ಬೋರ್ನ್​ನಲ್ಲಿ ಅವರ ಸತತ 33 ಗೆಲುವಿನ ಓಟವೂ ಕೊನೆಗೊಂಡಿದೆ ಮತ್ತು ಇಲ್ಲಿ ಸೆಮೀಸ್​ ಹಂತದಲ್ಲಿ ಅವರಿಗೆ ಇದು ಮೊದಲ ಸೋಲಾಗಿದೆ. ಈ ಮುನ್ನ ಅವರು ಮೆಲ್ಬೋರ್ನ್​ನಲ್ಲಿ ಕ್ವಾರ್ಟರ್​ಫೈನಲ್​ ಹಂತಕ್ಕೇರಿದ ಬಳಿಕ ಪ್ರತಿ ಬಾರಿಯೂ ಪ್ರಶಸ್ತಿ ಗೆದ್ದಿದ್ದರು.

3ನೇ ಶ್ರೇಯಾಂಕಿತ ಮೆಡ್ವೆಡೇವ್​ ಮತ್ತೊಂದು ಸೆಮಿಫೈನಲ್​ನಲ್ಲಿ ಜರ್ಮನಿಯ ಅಲೆಕ್ಸಾಂಡರ್​ ಜ್ವೆರೇವ್​ ಎದುರು 5-7, 3-6, 7-6, 7-6, 6-3ರಿಂದ 4 ಗಂಟೆ 18 ನಿಮಿಷಗಳ ಮ್ಯಾರಥಾನ್​ ಹೋರಾಟದಲ್ಲಿ ಗೆಲುವು ದಾಖಲಿಸಿದರು.

ಇದು ನಾನಾಡಿದ ಅತ್ಯಂತ ಕೆಟ್ಟ ಗ್ರಾಂಡ್​ ಸ್ಲಾಂ ಪಂದ್ಯವಾಗಿದೆ. ಸಿನ್ನರ್​ ಫೈನಲ್​ಗೇರಲು ನಿಜಕ್ಕೂ ಅರ್ಹರು. ನನ್ನನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದರು. ಆದರೆ ಇದು ನನ್ನ ವೃತ್ತೀಜಿವನ ಮುಕ್ತಾಯದ ಆರಂಭವೆಂಬುದನ್ನು ಒಪ್ಪಲಾರೆ ಎಂದು  ನೊವಾಕ್​ ಜೋಕೊವಿಕ್​ ಹೇಳಿದರು.