ಬೆಂಗಳೂರು: ಸಿಂಗಾಪುರ ತಂಡ ಮಹಿಳೆಯರ 13ನೇ ಏಷ್ಯನ್ ನೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಂಗಾಪುರ ತಂಡ 67-64 ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನಾಲ್ಕನೇ ಕ್ವಾರ್ಟರ್ ಅಂತ್ಯಕ್ಕೆ ಉಭಯ ತಂಡಗಳು 52-52 ಅಂಕಗಳಿಂದ ಸಮಬಲ ಸಾಧಿಸಿದ್ದವು. ಬಳಿಕ ನಡೆದ ಹೆಚ್ಚುವರಿ ಸಮಯದ ಆಟದಲ್ಲಿ ಸಿಂಗಾಪುರ ತಂಡ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡ ಹಾಂಕಾಂಗ್ ವಿರುದ್ಧ 67-48 ಅಂಕಗಳಿಂದ ಗೆಲುವು ದಾಖಲಿಸಿತು. ಆತಿಥೇಯ ಭಾರತ ತಂಡ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಸಚಿವ ರಾಮಲಿಂಗ ರೆಡ್ಡಿ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜು ಬಹುಮಾನ ವಿತರಿಸಿದರು. ಭಾರತೀಯ ನೆಟ್ಬಾಲ್ ಒಕ್ಕೂಟದ ಅಧ್ಯೆ ಸುಮನ್ ಕೌಶಿಕ್, ಏಷ್ಯಾ ನೆಟ್ಬಾಲ್ ಅಧ್ಯೆ ವಿಕ್ಟರಿ ಲಕ್ಷ್ಮಿ, ಏಷ್ಯಾ ನೆಟ್ಬಾಲ್ ಕಾರ್ಯದರ್ಶಿ ವಿವಿನ್ ಡಿ ಸೆಲ್ವಾ, ಏಷ್ಯಾ ನೆಟ್ಬಾಲ್ ಸಿಇಒ ಸೈರಸ್, ರಾಷ್ಟ್ರೀಯ ನೆಟ್ಬಾಲ್ ಅಭಿವೃದ್ಧಿ ಸಮಿತಿ ಚೇರ್ಮನ್ ಹರಿಓಂ ಕೌಶಿಕ್, ಭಾರತೀಯ ನೆಟ್ಬಾಲ್ ಒಕ್ಕೂಟದ ಉಪಾಧ್ಯಕ್ಷರಾದ ಅಮಿತ್ ಅರೋರ, ಅಶೋಕ್ ಕುಮಾರ್, ಗಿರೀಶ್ ಸಿ ಮತ್ತು ಮೀನಾ ಹಾಜರಿದ್ದರು.