ನವದೆಹಲಿ: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಮತ್ತು ನಾಲ್ವರು ಪ್ರಮುಖ ಡಬಲ್ಸ್ ಆಟಗಾರ್ತಿಯರು ಏಪ್ರಿಲ್ 27ರಿಂದ ಚೀನಾದ ಚೆಂಗ್ಡುನಲ್ಲಿ ನಡೆಯಲಿರುವ ಒಬೆರ್ ಕಪ್ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆಸರಿದಿದ್ದಾರೆ. ಇದೇ ವೇಳೆ ನಡೆಯಲಿರುವ ಪುರುಷರ ಥಾಮಸ್ ಕಪ್ನಲ್ಲಿ ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದ್ದು, ಕಳೆದ ಆವೃತ್ತಿಯಲ್ಲಿ ಜಯಿಸಿರುವ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಂಬಲದಲ್ಲಿದೆ.
ಕಳೆದ ಫೆಬ್ರವರಿಯಲ್ಲಿ ಏಷ್ಯಾ ಟೀಮ್ ಚಾಂಪಿಯನ್ಷಿಪ್ ಮೂಲಕ ಮರಳಿ ಕಣಕ್ಕಿಳಿದಿದ್ದ ಸಿಂಧು, ನಂತರದಲ್ಲಿ 6 ಟೂರ್ನಿಗಳಲ್ಲಿ ಆಡಿದ್ದಾರೆ. ಆದರೆ ಇದರಲ್ಲಿ ನಿರೀತ ನಿರ್ವಹಣೆ ತೋರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಮುನ್ನ ಪೂರ್ಣ ಫಿಟ್ನೆಸ್ ಕಡೆ ಹೆಚ್ಚಿನ ಗಮನಹರಿಸುವ ಸಲುವಾಗಿ ಸಿಂಧು ಉಬೆರ್ ಕಪ್ನಿಂದ ಹೊರಗುಳಿದಿದ್ದಾರೆ. ಇದೇ ವೇಳೆ ಡಬಲ್ಸ್ ಜತೆಗಾರರಾದ ಗಾಯತ್ರಿ ಗೋಪಿಚಂದ್-ತ್ರಿಸಾ ಜೋಲಿ, ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೋ ಒಲಿಂಪಿಕ್ಸ್ ಅರ್ಹತೆಯತ್ತ ಗಮನಹರಿಸುವ ಸಲುವಾಗಿ ಹಿಂದೆ ಸರಿದಿದ್ದಾರೆ. ಇದರಿಂದ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಮಹಿಳಾ ತಂಡದಲ್ಲಿ ಹೊಸಮುಖಗಳಿಗೆ ಸ್ಥಾನ ಕಲ್ಪಿಸಿದೆ. ಅನ್ಮೋಲ್ ರ್ಖಬ್, ತನ್ವಿ ಶರ್ಮ, ಆಶ್ಮಿತಾ ಚಾಲಿಹ, ಇಶಾರಾಣಿ ಬರುವಾ ಸಿಂಗಲ್ಸ್ ಆಟಗಾರ್ತಿಯರಾಗಿದ್ದಾರೆ.
2022ರಲ್ಲಿ ಚೊಚ್ಚಲ ಥಾಮಸ್ ಗೆದ್ದು ಇತಿಹಾಸ ಸೃಷ್ಟಿಸಿರುವ ಪುರುಷರ ತಂಡ ಈ ಸಲವೂ ಪೂರ್ಣ ಬಲದೊಂದಿಗೆ ಕಣಕ್ಕಿಳಿಯಲಿದೆ. ಎಚ್ಎಸ್ ಪ್ರಣಯ್, ಲಕ್ಷ$್ಯ ಸೇನ್, ಕಿಡಂಬಿ ಶ್ರೀಕಾತ್, ಪ್ರಿಯಾಂಶು ರಾಜಾವತ್ ಜತೆಗೆ ಕಿರಣ್ ಜಾರ್ಜ್ ಸಿಂಗಲ್ಸ್ ಆಟಗಾರರಾಗಿದ್ದರೆ, ಸಾತ್ವಿಕ್&ಚಿರಾಗ್ ಶೆಟ್ಟಿ, ಅರ್ಜುನ್&ಧ್ರುವ ಕಪಿಲಾ ಜತೆಗೆ ಕನ್ನಡಿಗ ಸಾಯಿ ಪ್ರತಿಕ್ ಮೀಸಲು ಡಬಲ್ಸ್ ಆಟಗಾರರಾಗಿದ್ದಾರೆ.
ಥಾಮಸ್ ಕಪ್ನಲ್ಲಿ ಭಾರತ ಈ ಬಾರಿ ಬಲಿಷ್ಠ ಇಂಡೋನೇಷ್ಯಾ, ಥಾಯ್ಲೆಂಡ್, ಇಂಗ್ಲೆಂಡ್ ಜತೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮಹಿಳಾ ತಂಡ ಉಬೆರ್ ಕಪ್ನಲ್ಲಿ 15 ಬಾರಿಯ ಚಾಂಪಿಯನ್ ಚೀನಾ, ಕೆನಡ ಮತ್ತು ಸಿಂಗಾಪುರ ಒಳಗೊಂಡ ಎ ಗುಂಪಿನಲ್ಲಿದೆ. ಪುರುಷರ ತಂಡ ಹಾಲಿ ಚಾಂಪಿಯನ್ ಆಗಿರುವ ಕಾರಣ ಟೂರ್ನಿಗೆ ನೇರಅರ್ಹತೆ ಗಳಿಸಿತ್ತು.