ಕ್ರೀಡೆ

ಮ್ಯಾಡ್ರಿಡ್ ಓಪನ್​ನಲ್ಲಿ ಸೆಮಿಫೈನಲ್​ಗೆ ಸುಮೀತ್​-ಸಿಕ್ಕಿ ರೆಡ್ಡಿ ದಂಪತಿ

ಮ್ಯಾಡ್ರಿಡ್​: ಭಾರತದ ಸುಮೀತ್​ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ದಂಪತಿ ಮ್ಯಾಡ್ರಿಡ್​ ಸ್ಪೇನ್​ ಮಾಸ್ಟರ್ಸ್​ ಸೂಪರ್​-300 ಬ್ಯಾಡ್ಮಿಂಟನ್​ ಟೂರ್ನಿಯ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ. ಸಿಂಗಲ್ಸ್​ನಲ್ಲಿ ಪಿವಿ ಸಿಂಧು ಎಂಟರ ಘಟ್ಟದಲ್ಲೇ ಸವಾಲು ಅಂತ್ಯಗೊಳಿಸಿದರು. ಮಹಿಳಾ ಡಬಲ್ಸ್​ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ಟೋ ಜೋಡಿಯೂ ನಿರಾಸೆ ಅನುಭವಿಸಿತು.

ಶುಕ್ರವಾರ ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಸುಮೀತ್​-ಸಿಕ್ಕಿ ಜೋಡಿ 4ನೇ ಶ್ರೇಯಾಂಕಿತ ಇಂಡೋನೇಷ್ಯಾದ ರೆಹನ್​ ನೌಲ್​ ಕುಶರ್​ಜಾಂಟೊ&ಲಿಸಾ ಆಯು ಕುಸುಮಾವತಿ ಜೋಡಿಗೆ 14-21, 21-11, 21-17 ಗೇಮ್​ಗಳಿಂದ ಆಘಾತಕಾರಿ ಸೋಲುಣಿಸಿತು.

2ನೇ ಶ್ರೇಯಾಂಕಿತೆ ಪಿವಿ ಸಿಂಧು ಥಾಯ್ಲೆಂಡ್​ನ ಸುಪನಿದ ಕೇಟ್​ಥೋಂಗ್​ ವಿರುದ್ಧ ಒಂದು ಗಂಟೆ 17 ನಿಮಿಷಗಳ ರೋಚಕ ಹೋರಾಟದಲ್ಲಿ 26-24, 17-21, 20-22ರಿಂದ ಸೋಲು ಅನುಭವಿಸಿದರು. ಇದರೊಂದಿಗೆ ಸಿಂಧು ಪ್ರಶಸ್ತಿ ಗೆಲುವಿನ ಬರ ಮುಂದುವರಿದಂತಾಗಿದೆ.

3ನೇ ಶ್ರೇಯಾಂಕಿತ ಅಶ್ವಿನಿ-ತನಿಷಾ ಜೋಡಿ ಚೀನಾ ತೈಪೆಯ ಲೀ ಚಿಯಾ ಸಿನ್​-ಟೆಂಗ್​ ಚುನ್​ ಸುನ್​ ಜೋಡಿಯ ಎದುರು 13-21, 19-21 ನೇರಗೇಮ್​ಗಳಿಂದ ಪರಾಭವಗೊಂಡಿತು.