ಕೊಲಂಬೊ: ಭಾರತದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ವಿಶ್ವದ ಹಲವು ದೇಶಗಳ ಟಿ20 ಲೀಗ್ಗಳಿಗೆ ಸ್ಫೂರ್ತಿಯಾಗಿವೆ. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾಗಳಲ್ಲಿ ಈಗಾಗಲೆ ಐಪಿಎಲ್ ಮಾದರಿಯ ಟಿ20 ಲೀಗ್ಗಳು ಉತ್ತಮ ಯಶಸ್ಸು ಕಂಡಿವೆ. ಇದೀಗ ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) ಟಿ20 ಟೂರ್ನಿಗೂ ಐಪಿಎಲ್ ಸ್ಫೂರ್ತಿಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಎಲ್ಪಿಎಲ್ನಲ್ಲಿ ಆಡುವ ತಂಡಗಳ ಹೆಸರು ಕೂಡ ಬಹುತೇಕ ಐಪಿಎಲ್ ತಂಡಗಳ ಜತೆಗೆ ಹೋಲಿಕೆ ಹೊಂದಿವೆ!
ಆಗಸ್ಟ್ 28ರಿಂದ ಸೆಪ್ಟೆಂಬರ್ 20ರವರೆಗೆ ಎಲ್ಪಿಎಲ್ ಟೂರ್ನಿ ನಿಗದಿಯಾಗಿದೆ. ಇದರಲ್ಲಿ 5 ತಂಡಗಳು ಕಣಕ್ಕಿಳಿಯಲಿವೆ. ಅವುಗಳೆಂದರೆ ಕೊಲಂಬೊ ಸೂಪರ್ಕಿಂಗ್ಸ್, ಗಾಲೆ ಲಯನ್ಸ್, ಕ್ಯಾಂಡಿ ರಾಯಲ್ಸ್, ಜಫ್ನಾ ಸನ್ರೈಸಸ್ ಮತ್ತು ಡಂಬುಲಾ ಕ್ಯಾಪಿಟಲ್ಸ್. ಈ ಹೆಸರುಗಳು ಐಪಿಎಲ್ನ ಚೆನ್ನೈ ಸೂಪರ್ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಹೈದರಾಬಾದ್ ಸನ್ರೈಸರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಈ ಹಿಂದಿನ ಗುಜರಾತ್ ಲಯನ್ಸ್ ತಂಡಗಳ ಹೆಸರುಗಳನ್ನು ನೆನಪಿಸುತ್ತಿವೆ.
ಎಲ್ಪಿಎಲ್ನಲ್ಲಿ ತಂಡಗಳ ಹೆಸರಿನಲ್ಲೂ ಐಪಿಎಲ್ ಟೂರ್ನಿಯನ್ನು ಕಾಪಿ ಮಾಡಿರುವುದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ಗಳಿಗೂ ಒಳಗಾಗಿದೆ. ಎಲ್ಪಿಎಲ್ನಲ್ಲಿ ತಂಡಗಳಿಗೆ ಹೆಸರು ನೀಡುವಲ್ಲೂ ಸ್ವಂತ ಬುದ್ದಿವಂತಿಕೆ ಉಪಯೋಗಿಸದಿರುವುದಕ್ಕೆ ಲಂಕಾ ಕ್ರಿಕೆಟ್ ಮಂಡಳಿಯ ಕಾಲೆಳೆಯಲಾಗುತ್ತಿದೆ. ಶ್ರೀಲಂಕಾ ಕ್ರಿಕೆಟ್ ಅಷ್ಟರ ಮಟ್ಟಿಗೆ ಬಡವಾಗಿದೆಯೇ? ಐಪಿಎಲ್ ಬಿ ತಂಡಗಳಂತೆ ಎಲ್ಪಿಎಲ್ ತಂಡಗಳಿಗೆ ಹೆಸರಿಸಲಾಗಿದೆ ಎಂದೂ ಟೀಕಿಸಲಾಗುತ್ತಿದೆ.