Shubman Gill : ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದೆ. ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ದೀರ್ಘಾವಧಿಯ ಸ್ವರೂಪದಿಂದ ನಿವೃತ್ತಿ ಘೋಷಿಸಿದ ನಂತರ ಶುಭಮನ್ ಗಿಲ್ ಅವರನ್ನು ಟೀಮ್ ಇಂಡಿಯಾದ ನೂತನ ಟೆಸ್ಟ್ ನಾಯಕನನ್ನಾಗಿ ಬಿಸಿಸಿಐ ನೇಮಿಸಿದೆ.
ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್, ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಗಿಲ್ ಅವರು ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಕೆಲವು ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. ಸದ್ಯ ಗಿಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಗಿಲ್ ಅವರ ಒಟ್ಟು ಆಸ್ತಿ ಮತ್ತು ಅವರು ಪಡೆಯುವ ಸಂಬಳದ ವಿವರಗಳನ್ನು ನಾವೀಗ ತಿಳಿದುಕೊಳ್ಳೋಣ.
ಶುಭಮನ್ ಗಿಲ್ ಅವರು ಐಪಿಎಲ್ ಮೂಲಕ ಭಾರಿ ಮೊತ್ತವನ್ನು ಗಳಿಸುತ್ತಿದ್ದಾರೆ. ಗಿಲ್ 2018ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಸೀಸನ್‌ನಲ್ಲಿಯೇ 1.8 ಕೋಟಿ ರೂ.ಗಳನ್ನು ಪಡೆದರು. ಬಳಿಕ ಮೂರು ಸೀಸನ್‌ಗಳಿಗೆ ಅದೇ ಸಂಬಳವನ್ನು ಪಡೆದರು. ಇದಾದ ನಂತರ, ಗುಜರಾತ್ ಟೈಟಾನ್ಸ್ ತಂಡ 2022ರಲ್ಲಿ 8 ಕೋಟಿ ರೂ.ಗಳಿಗೆ ಖರೀದಿಸಿತು. 2023 ಮತ್ತು 2024ರ ಸೀಸನ್‌ಗಳಲ್ಲಿಯೂ ಅವರು ಅದೇ ಮೊತ್ತವನ್ನು ಪಡೆದರು. ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ 16.5 ಕೋಟಿ ರೂ.ಗಳಿಗೆ ಗುಜರಾತ್ ತಂಡ ಗಿಲ್ ಅವರನ್ನು ಉಳಿಸಿಕೊಂಡಿತು. ಹೀಗಾಗಿ, ಗಿಲ್ ಅವರು ಐಪಿಎಲ್‌ನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ.
ಇನ್ನು ಕಳೆದ ವರ್ಷದವರೆಗೆ ಗಿಲ್ ಅವರು ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿದ್ದರು ಮತ್ತು 3 ಕೋಟಿ ರೂ. ಸಂಬಳವನ್ನು ಪಡೆಯುತ್ತಿದ್ದರು. ಈ ಬಾರಿ ಅವರಿಗೆ ಬಡ್ತಿ ಸಿಕ್ಕಿದ್ದು, ಬಿಸಿಸಿಐ ಅವರನ್ನು ಎ ಗ್ರೇಡ್‌ಗೆ ಸೇರಿಸಿದೆ. ಇದರೊಂದಿಗೆ, ಅವರು ವರ್ಷಕ್ಕೆ 5 ಕೋಟಿ ರೂ. ಪಡೆಯಲಿದ್ದಾರೆ. ಇದರ ಜೊತೆಗೆ, ಪಂದ್ಯ ಶುಲ್ಕದ ಅಡಿಯಲ್ಲಿ ಬಹಳಷ್ಟು ಹಣ ಪಡೆಯಲಿದ್ದಾರೆ. ಅಂದರೆ, ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಮತ್ತು ಪ್ರತಿ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಪಡೆಯುತ್ತಾರೆ.
ಗಿಲ್ ಅವರು ಅನೇಕ ಜನಪ್ರಿಯ ಬ್ರ್ಯಾಂಡ್‌ಗಳಿಗೆ ಬ್ರಾಂಡ್ ರಾಯಭಾರಿಯಾಗಿದ್ದಾರೆ. ಇವುಗಳಲ್ಲಿ ನೈಕ್, ಜೆಬಿಎಲ್, ಕ್ಯಾಸಿಯೊ, ಸಿಯೆಟ್, ಟಾಟಾ ಕ್ಯಾಪಿಟಲ್, ಜಿಲೆಟ್, ಗೇಮ್ಸ್24×7, ಡ್ಯಾನೋನ್, ಮೈ11ಸರ್ಕಲ್, ಭಾರತ್‌ಪೇ, ಇತ್ಯಾದಿಗಳು ಸೇರಿವೆ. ಈ ಬ್ರಾಂಡ್ ಜಾಹೀರಾತುಗಳ ಮೂಲಕ ಗಿಲ್ ಅವರು ವರ್ಷಕ್ಕೆ 8 ರಿಂದ 10 ಕೋಟಿ ರೂಪಾಯಿ ಗಳಿಸುತ್ತಾರೆಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.
ಗಿಲ್ ಅವರು ಪಂಜಾಬ್‌ನ ಫಿರೋಜ್‌ಪುರದಲ್ಲಿ ಸುಮಾರು 3.2 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಅವರ ಬಳಿ ದುಬಾರಿ ಕಾರುಗಳ ಸಂಗ್ರಹವೂ ಇದೆ. ಇದರಲ್ಲಿ ರೇಂಜ್ ರೋವರ್, ಮರ್ಸಿಡಿಸ್-ಬೆನ್ಜ್ E350 ಮತ್ತು ಆನಂದ್ ಮಹೀಂದ್ರಾ ಉಡುಗೊರೆಯಾಗಿ ನೀಡಿದ ಮಹೀಂದ್ರಾ ಥಾರ್ ಸೇರಿವೆ. ಗಿಲ್ಗೆ ಕಾರುಗಳು ಕ್ರೇಜ್ ಕೂಡ ಇದೆ.
ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಶುಭ್‌ಮನ್ ಗಿಲ್ ಅವರ ನಿವ್ವಳ ಮೌಲ್ಯ 2025ರ ವೇಳೆಗೆ 32 ರಿಂದ 50 ಕೋಟಿ ರೂ.ಗಳ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ. ಇದೀಗ ಟೀಮ್ ಇಂಡಿಯಾ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿರುವುದರಿಂದ ಇನ್ನಷ್ಟು ಆದಾಯ ಗಿಲ್ ಅವರನ್ನು ಅರಸಿ ಬರಲಿದೆ. ಅಲ್ಲದೆ, ಈ ವರ್ಷ ಐಪಿಎಲ್ನಲ್ಲೂ ತಮ್ಮ ತಂಡವನ್ನು ಯಶಸ್ಸಿನ ಪಥದಲ್ಲಿ ಗಿಲ್ ತೆಗೆದುಕೊಂಡು ಹೋಗುತ್ತಿದ್ದು, ಗಿಲ್ ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ. ಇನ್ನೆರೆಡು ವರ್ಷಗಳಲ್ಲಿ ಅವರ ಆಸ್ತಿಯ ಮೌಲ್ಯ ದುಪ್ಪಟ್ಟಾದರೂ ಅಚ್ಚರಿಪಡಬೇಕಿಲ್ಲ.
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ ( ವಿಕೆಟ್ ಕೀಪರ್ ಮತ್ತು ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್ ಮತ್ತು ಕುಲದೀಪ್ ಯಾದವ್ ಸೇರಿ 18 ಜನ ತಂಡದಲ್ಲಿ ಸ್ಥಾವ ಪಡೆದಿದ್ದಾರೆ. (ಏಜೆನ್ಸೀಸ್)