ಕ್ರೀಡೆ

ನಮ್ಮ ಗಮನ ಅದರ ಮೇಲಲ್ಲ... ಗೆದ್ದ ಬೆನ್ನಲ್ಲೇ ಕೊಹ್ಲಿ, RCBಗೆ ಟಾಂಗ್​ ಕೊಟ್ಟ ಗಿಲ್, ಅಭಿಮಾನಿಗಳ ಆಕ್ರೋಶ! Shubman Gill

Shubman Gill : ನಿನ್ನೆ (ಏಪ್ರಿಲ್​ 02) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 14ನೇ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾದವು. ಗುಜರಾತ್​ ತಂಡ ಈ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಇದರ ಬೆನ್ನಲ್ಲೇ ನಾಯಕ ಶುಭ್‌ಮನ್ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಒಂದು ವೈರಲ್ ಆಗಿದ್ದು, ವಿರಾಟ್​ ಕೊಹ್ಲಿ ಮತ್ತು ಆರ್​​​ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆರ್​ಸಿಬಿ ಮತ್ತು ವಿರಾಟ್​ ಕೊಹ್ಲಿಯನ್ನು ಉಲ್ಲೇಖಿಸಿಯೇ ಈ ಪೋಸ್ಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಆಟಗಾರರು ಸಂಭ್ರಮಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿರುವ ಗಿಲ್, "ನಮ್ಮ ಗಮನ ಆಟದ ಮೇಲಿದೆ ಹೊರತು ಗದ್ದಲ ಮೇಲಲ್ಲ" ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಗಿಲ್ ಅವರ ಉದ್ದೇಶವೇನು? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೋರಾಗಿ ಕೂಗಿದ ಆರ್‌ಸಿಬಿ ಅಭಿಮಾನಿಗಳ ಬಗ್ಗೆಯೋ? ಅಥವಾ ಭುವನೇಶ್ವರ್ ಕುಮಾರ್ ವಿಕೆಟ್ ಪಡೆದಾಗ ಕೊಹ್ಲಿ ಕೂಗಿ ಸಂಭ್ರಮಿಸುವುದರ ಬಗ್ಗೆಯೋ? ಆದರೆ, ಗಿಲ್ ಈ ಪೋಸ್ಟ್ ಅನ್ನು ಕೊಹ್ಲಿಯನ್ನು ಗುರಿಯಾಗಿಸಿಕೊಂಡು ಮಾಡಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಹೀಗಾಗಿ ಗಿಲ್ ಅವರನ್ನು ಅನೇಕರು ಟೀಕಿಸುತ್ತಿದ್ದಾರೆ.

ಇನ್ನು ಪಂದ್ಯದ ನಂತರ ಮಾತನಾಡಿದ ಗಿಲ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯನ್ನು 170 ರನ್‌ಗಳಿಗೆ ಸೀಮಿತಗೊಳಿಸಿದ್ದು ತುಂಬಾ ಸಂತೋಷ ತಂದಿದೆ ಎಂದರು. ಆರ್‌ಸಿಬಿ ಬೇಗನೆ ವಿಕೆಟ್ ಪಡೆದರೆ, ಪಂದ್ಯ ನಮ್ಮ ಪರವಾಗಿ ವಾಲುತ್ತದೆ ಎಂದು ಗೊತ್ತಿತ್ತು. ನಮ್ಮ ಯೋಜನೆಗಳನ್ನು ಯೋಜಿಸಿದಂತೆ ಜಾರಿಗೆ ತರಲಾಗಿದೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಆಡಿದೆವು ಎಂದು ಗಿಲ್​ ಹೇಳಿದರು.

ಪಂದ್ಯ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (54 ರನ್​ 40 ಎಸೆತ, 1 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರು. ಜಿತೇಶ್ ಶರ್ಮಾ (33) ಮತ್ತು ಟಿಮ್ ಡೇವಿಡ್ (32) ಉತ್ತಮ ಪ್ರದರ್ಶನ ನೀಡಿದರು. ಫಿಲ್ ಸಾಲ್ಟ್ (14), ವಿರಾಟ್ ಕೊಹ್ಲಿ (7), ದೇವದತ್ ಪಡಿಕ್ಕಲ್ (4), ರಜತ್ ಪಾಟಿದಾರ್ (12), ಮತ್ತು ಕೃನಾಲ್ ಪಾಂಡ್ಯ (5) ವಿಫಲರಾದರು. ಗುಜರಾತ್ ಬೌಲರ್‌ಗಳಲ್ಲಿ ಸಿರಾಜ್ ಮೂರು ವಿಕೆಟ್ ಪಡೆದರು. ಸಾಯಿ ಕಿಶೋರ್ ಎರಡು ವಿಕೆಟ್ ಪಡೆದರೆ, ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ ಮತ್ತು ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ನಂತರ, ಜೋಸ್ ಬಟ್ಲರ್ (ಔಟಾಗದೆ 73 ರನ್​, 39 ಎಸೆತ, 5 ಬೌಂಡರಿ, 6 ಸಿಕ್ಸರ್) ಬಿರುಸಿನ ಅರ್ಧಶತಕ ಗಳಿಸಿದರೆ, ಸಾಯಿ ಸುದರ್ಶನ್ (49) ಮತ್ತು ಶೆರ್ಫೇನ್ ರುದರ್ಫೋರ್ಡ್ (ಔಟಾಗದೆ 30) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗುಜರಾತ್ 17.5 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. (ಏಜೆನ್ಸೀಸ್​)