ನವದೆಹಲಿ: ಭಾರತ ತಂಡದ ಮ್ಯಾನೇಜ್ಮೆಂಟ್ ಮತ್ತು ಮಂಡಳಿಯ ಸೂಚನೆಯ ನಡುವೆಯೂ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್&ಬ್ಯಾಟರ್ ಇಶಾನ್ ಕಿಶನ್ ಅವರನ್ನು ಬಿಸಿಸಿಐ, ಮುಂದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಋತುವಿನ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈಬಿಡಲಿದೆ ಎಂದು ವರದಿಯಾಗಿದೆ.
ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಮಂಡಳಿ 2023-24ರ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಈಗಾಗಲೆ ಬಹುತೇಕ ಅಂತಿಮಗೊಳಿಸಿದ್ದು, ಅದರಲ್ಲಿ ಶ್ರೇಯಸ್, ಕಿಶನ್ ಹೆಸರಿಲ್ಲ ಎನ್ನಲಾಗಿದೆ.
ಮಾನಸಿಕ ಆರೋಗ್ಯದ ಕಾರಣ ನೀಡಿ ಕಳೆದ ಡಿಸೆಂಬರ್ನಲ್ಲಿ ದಣ ಆಫ್ರಿಕಾ ಪ್ರವಾಸ ಮೊಟಕುಗೊಳಿಸಿ ತವರಿಗೆ ಮರಳಿದ್ದ ಇಶಾನ್ ಕಿಶನ್, ಭಾರತ ತಂಡಕ್ಕೆ ಮರಳಲು ರಣಜಿಯಲ್ಲಿ ಆಡುವುದು ಕಡ್ಡಾಯ ಎಂಬ ಸೂಚನೆಯನ್ನೂ ಪಾಲಿಸಿಲ್ಲ. ಬದಲಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಜತೆಗೂಡಿ ಐಪಿಎಲ್ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಕೆಟ್ಟ ಾಮ್ರ್ನಿಂದ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದ ಬಳಿಕ, ಫಿಟ್ ಆಗಿದ್ದರೂ ರಣಜಿಯಲ್ಲಿ ಆಡುತ್ತಿಲ್ಲ. ಶ್ರೇಯಸ್ಗೆ ಬೆನ್ನುನೋವು ಇದೆ ಎಂದು ವರದಿಯಾಗಿದ್ದರೂ, ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಎನ್ಸಿಎ ವೈದ್ಯ ನಿತಿನ್ ಪಟೇಲ್ ದೃಢಪಡಿಸಿದ್ದಾರೆ.
20220-23ರ ಬಿಸಿಸಿಐ ಕೇಂದ್ರಿಯ ಗುತ್ತಿಗೆಯಲ್ಲಿ ಶ್ರೇಯಸ್ ಅಯ್ಯರ್ ವಾರ್ಷಿಕ 3 ಕೋಟಿ ರೂ. ಸಂಭಾವನೆಯ ಬಿ ಶ್ರೇಣಿಯಲ್ಲಿದ್ದರೆ, ಇಶಾನ್ ಕಿಶನ್ ವಾರ್ಷಿಕ 1 ಕೋಟಿ ರೂ. ಸಂಭಾವನೆಯ ಸಿ ಶ್ರೇಣಿಯಲ್ಲಿದ್ದಾರೆ.