ಕ್ರೀಡೆ

ಮೂರನೇ ಟೆಸ್ಟ್​ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್; ಸರಣಿಯಿಂದ ಹೊರಗುಳಿದ ಸ್ಟಾರ್​ ಬ್ಯಾಟ್ಸ್​ಮನ್

ಮುಂಬೈ: ಸ್ಟಾರ್​ ಆಟಗಾರರ ಅಲಭ್ಯತೆಯಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ ಸಮಬಲ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಆರಂಭಕ್ಕೂ ಮುನ್ನ ಈಗ ಟೀಂ ಇಂಡಿಯಾಗೆ ಸಂಕಷ್ಟ ಒಂದು ಎದುರಾಗಿದ್ದು, ಅನಾರೋಗ್ಯದಿಂದ ಮತ್ತೊಬ್ಬ ಸ್ಟಾರ್​ ಆಟಗಾರ ಸರಣಿಯ ಉಳಿದ ಪಂದ್ಯಗಳಿಂದ ಹೊರ ನಡೆದಿದ್ದಾರೆ.

ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬೆನ್ನು ನೋವು, ತೊಡೆಸಂಧು ನೋವಿನ ಕಾರಣದಿಂದ ಶ್ರೇಯಸ್ ಅಯ್ಯರ್ ಅವರನ್ನು ಫೆಬ್ರವರಿ 15ರಿಂದ ಶುರುವಾಗಲಿರುವ ಮೂರನೇ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ. ಶ್ರೇಯಸ್​ ಅಯ್ಯರ್ ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ 35, 13, 27 ಮತ್ತು 29 ರನ್ ಗಳಿಸಿದ್ದಾರೆ.

ಶ್ರೇಯಸ್​ ಅಯ್ಯರ್ ಗಾಯಗೊಳ್ಳುವುದರೊಂದಿಗೆ ಟೀಂ ಇಂಡಿಯಾದಲ್ಲಿ ಗಾಯಕ್ಕೆ ತುತ್ತಾದವರ ಸಂಖ್ಯೆ ಮೂರಕ್ಕೇರಿದೆ. ಅಯ್ಯರ್​ಗೂ ಮೊದಲು ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇದೀಗ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಈ ಇಬ್ಬರ ಬಗ್ಗೆ ಬಿಗ್ ಅಪ್​ಡೇಟ್ ಹೊರಬಿದ್ದಿದ್ದು, ಇವರಿಬ್ಬರು ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಒಂದು ವೇಳೆ ಅನಾರೋಗ್ಯದಿಂದ ಶ್ರೇಯಸ್​ ಅಯ್ಯರ್​ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಹೊರಗುಳಿದರೆ ಅವರ ಸ್ಥಾನಕ್ಕೆ ಯುವ ಬ್ಯಾಟ್ಸ್​ಮನ್​ ಸರ್ಫರಾಜ್​ ಖಾನ್​ರನ್ನು ಆಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಆದರೆ, ವಿರಾಟ್​ ಕೊಹ್ಲಿ ತಂಡಕ್ಕೆ ವಾಪಸ್ಸಾಗಲಿದ್ದಾರಾ ಎಂಬ ಸುದ್ದಿ ಮಾತ್ರ ಇನ್ನೂ ನಿಗೂಢವಾಗಿದೆ. ಸರಣಿಯ ಕೊನೆಯ ಮೂರು ಟೆಸ್ಟ್‌ ಪಂದ್ಯಗಳಿಗೆ ಆಯ್ಕೆಗಾರರು ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಮೂರನೇ ಟೆಸ್ಟ್‌ ಫೆಬ್ರುವರಿ 15ರಂದು ರಾಜಕೋಟ್‌ನಲ್ಲಿ ನಡೆಯಲಿದೆ. ಐದು ಪಂದ್ಯಗಳ ಸರಣಿ ಈಗ 1–1ರಲ್ಲಿ ಸಮನಾಗಿದೆ.