ಬೆಂಗಳೂರು: ಕರೊನಾ ವೈರಸ್ ಹಾವಳಿಯ ನಡುವೆ ಇತರ ಕೆಲ ಕ್ರೀಡೆಗಳಂತೆ ಬ್ಯಾಡ್ಮಿಂಟನ್ ಆಟವೂ ನಿಧಾನವಾಗಿ ಚಟುವಟಿಕೆ ಆರಂಭಿಸಿದೆ. ಇದರ ಜತೆಯಲ್ಲೇ ಹೊಸ ಸಮಸ್ಯೆಯೊಂದು ಕೂಡ ಎದುರಾಗಿದೆ. ಅದುವೇ ಷಟಲ್‌ಗಳ ಕೊರತೆ!
ದೇಶದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರರು ಹೆಚ್ಚಾಗಿ ಯೊನೆಕ್ಸ್ ಷಟಲ್‌ಗಳನ್ನು ಬಳಸುತ್ತಾರೆ. ಆದರೆ ಕರೊನಾ ಭೀತಿಯಿಂದಾಗಿ ಚೀನಾದಿಂದ ಆಮದು ನಿರ್ಬಂಧಿಸಲ್ಪಟ್ಟಿರುವ ವಸ್ತುಗಳಲ್ಲಿ ಷಟಲ್ ಕೂಡ ಸೇರಿದೆ. ಇದರಿಂದಾಗಿ ಕಳೆದ ಜುಲೈನಿಂದಲೇ ಷಟ್ಲರ್‌ಗಳ ಕೊರತೆ ಶುರುವಾಗಿದೆ. ಷಟಲ್ ಡೀಲರ್‌ಗಳ ಬಳಿ ಈಗ ಕೆಲವೇ ಟ್ಯೂಬ್ (12 ಷಟಲ್‌ಗಳ ಪೊಟ್ಟಣ) ಉಳಿದುಕೊಂಡಿವೆ ಎನ್ನಲಾಗಿದೆ.
ವಿಶ್ವದ ಶೇ.90ರಷ್ಟು ಷಟಲ್‌ಗಳು ಚೀನಾದಲ್ಲೇ ತಯಾರಾಗುತ್ತವೆ. ಹೆಣ್ಣು ಬಾತುಕೋಳಿಯ ಗರಿ ಇದಕ್ಕೆ ಬಳಸಲಾಗುವ ಪ್ರಮುಖ ಕಚ್ಚಾ ವಸ್ತು. ಕೇಂದ್ರ ಸರ್ಕಾರ ಈಗ ಚೀನಾದಿಂದ ಈ ರೀತಿ ಗರಿಯ ವಸ್ತುಗಳ ಆಮದು ನಿರ್ಬಂಧಿಸಿದೆ.
ಈ ಸಮಸ್ಯೆಯನ್ನು ಬೇಗನೆ ಪರಿಹರಿಸದಿದ್ದರೆ ರಾಷ್ಟ್ರೀಯ ಶಿಬಿರಕ್ಕೂ ಷಟಲ್‌ಗಳ ಕೊರತೆ ಎದುರಾಗಲಿದೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ. ಥಾಮಸ್ ಮತ್ತು ಉಬೆರ್ ಕಪ್‌ಗೆ ಸಿದ್ಧತೆ ನಡೆಸುತ್ತಿರುವ ಷಟ್ಲರ್‌ಗಳು ಈಗ ಹಳೆಯ ಸ್ಟಾಕ್‌ನ ಷಟಲ್‌ಗಳನ್ನೇ ಬಳಸುತ್ತಿದ್ದಾರೆ. ಹೊಸ ಷಟಲ್‌ಗಳು ಬೇಗನೆ ಬರದಿದ್ದರೆ ಅಭ್ಯಾಸಕ್ಕೆ ತೊಂದರೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡೆಮಿಯ ಮುಖ್ಯ ಕೋಚ್ ವಿಮಲ್ ಕುಮಾರ್ ಕೂಡ ಈ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮುಂದಿನ ಕೆಲ ವಾರಗಳಲ್ಲಿ ಷಟಲ್‌ಗಳೇ ಲಭ್ಯವಿಲ್ಲದೆ ಹೋಗಬಹುದು. ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಕರೊನಾ ವೈರಸ್ ಭೀತಿಯಿಂದಾಗಿ ಷಟಲ್‌ಗಳ ಮರುಬಳಕೆಗೂ ಕಡಿವಾಣ ಹಾಕಲಾಗಿದೆ. ಹೀಗಾಗಿ ಚೀನಾದಿಂದ ಹೊಸ ಷಟಲ್‌ಗಳು ಸಾಧ್ಯವಾದಷ್ಟು ಬೇಗನೆ ಆಮದು ಆಗದಿದ್ದರೆ ದೇಶದಲ್ಲಿ ಬ್ಯಾಡ್ಮಿಂಟನ್ ಚಟುವಟಿಕೆಯೇ ಸಂಪೂರ್ಣವಾಗಿ ನಿಂತುಹೋಗುವ ಅಪಾಯ ಎದುರಾಗಿದೆ.