ಕ್ರೀಡೆ

ಶೋಯಿಬ್​ ಇನ್​ಸ್ಟಾಗ್ರಾಂ ಬಯೋ ಸುಳಿವು: ಸಾನಿಯಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಖಚಿತ?

ದುಬೈ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಭಾರೀ ಸಂಚಲನ ಸೃಷ್ಟಿಸಿತ್ತು. ಆ ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ಸ್ಟಾರ್​ ದಂಪತಿಯ ಡಿವೋರ್ಸ್​ ವಿಚಾರ ಸದ್ದು ಮಾಡುತ್ತಿದೆ. ಕಳೆದ ಬಾರಿ ಸಾನಿಯಾ ನಡೆ ಈ ಅನುಮಾನ ಸೃಷ್ಟಿ ಮಾಡಿತ್ತು. ಆದರೆ, ಈಗ ಶೋಯಿಬ್​ ನಡೆ ಅನುಮಾನ ಹುಟ್ಟುಹಾಕಿದೆ.

ಶೋಯಿಬ್​ ಮಲಿಕ್​ ಅವರ ಇನ್​ಸ್ಟಾಗ್ರಾಂ ಬಯೋದಲ್ಲಾಗಿರುವ ಬದಲಾವಣೆ ಡಿವೋರ್ಸ್​ ವದಂತಿಗೆ ಪುಷ್ಠಿ ನೀಡಿದೆ. ಈ ಮೊದಲು ಬಯೋದಲ್ಲಿ ಸೂಪರ್​ವುಮ್ಯನ್​ ಸಾನಿಯಾ ಮಿರ್ಜಾರ ಪತಿ ಎಂದು ಶೋಯಿಬ್​ ಬರೆದುಕೊಂಡಿದ್ದರು. ಆದರೆ, ಈಗ ಅದನ್ನು ತೆಗೆದಿರುವುದನ್ನು ನೋಡಿದರೆ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿರಬಹುದು ಖಚಿತ ಎನ್ನಲಾಗುತ್ತದೆ. ಶೀಘ್ರದಲ್ಲೇ ಇಬ್ಬರು ಬೇರೆ ಬೇರೆಯಾಗಲಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಅಂದಹಾಗೆ ಸಾನಿಯಾ ಮತ್ತು ಮಲಿಕ್​, ಕ್ರೀಡಾಲೋಕದ ಅತ್ಯಂತ ಸುಂದರವಾದ ಜೋಡಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಂಪ್ರದಾಯಿಕ ಎದುರಾಳಿ ಆಟಗಾರರಿಬ್ಬರ ಪ್ರೇಮವಿವಾಹವು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟರೂ ಎಲ್ಲ ವಿವಾದಗಳನ್ನು ಬದಿಗೊತ್ತಿ 2010ರಲ್ಲಿ ಇಬ್ಬರೂ ಮದುವೆ ಆಗಿದ್ದಾರೆ. ದಂಪತಿಗೆ ಇಜಾನ್​ ಮಿರ್ಜಾ ಮಲ್ಲಿಕ್ ಹೆಸರಿನ ಮಗನಿದ್ದಾನೆ. ಸದ್ಯ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮಗ ಇಜಾನ್​ಗೆ ಸಹ-ಪೋಷಕರಾಗಿದ್ದಾರೆ ಎನ್ನಲಾಗುತ್ತಿದೆ.

ವದಂತಿ ಆರಂಭವಾಗಿದ್ದು ಯಾವಾಗ?

ಕಳೆದ ವರ್ಷ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. (ಏಜೆನ್ಸೀಸ್​)