ಕ್ರೀಡೆ

ಸಾನಿಯಾ ಮಿರ್ಜಾ ಭೇಟಿಯಾಗಲು ಪತಿ ಶೋಯಿಬ್​ ಮಲಿಕ್​ ಪರದಾಟ...!

ಬೆಂಗಳೂರು: ಇಂಗ್ಲೆಂಡ್​ಗೆ ತೆರಳುವುದಕ್ಕೂ ಮುನ್ನ ಭಾರತದಲ್ಲಿರುವ ಪತ್ನಿ ಸ್ಟಾರ್​ ಟೆನಿಸ್​ ಪಟು ಸಾನಿಯಾ ಮಿರ್ಜಾ ಹಾಗೂ ಮಗ ಇಜಾನ್​ ಮಿರ್ಜಾ ಮಲಿಕ್​ ಅವರನ್ನು ನೋಡುವ ಹಂಬಲಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯಿಬ್​ ಮಲಿಕ್​ ಆಸೆ ಕೈಗೂಡುವುದು ಅನುಮಾನವಾಗಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ ಜುಲೈ 31ರವರೆಗೂ ವಿಸ್ತರಣೆಯಾಗಿದ್ದರೆ, ಜುಲೈ 24 ರಂದು ಶೋಯಿಬ್​ ಇಂಗ್ಲೆಂಡ್​ನಲ್ಲಿರುವ ತಂಡ ಕೂಡಿಕೊಳ್ಳಬೇಕಿದೆ. ಇಂಗ್ಲೆಂಡ್​ ಪ್ರವಾಸದ ಬಳಿಕವಷ್ಟೇ ಶೋಯಿಬ್​ ಮಲಿಕ್​ಗೆ ಪತ್ನಿ ಹಾಗೂ ಮಗನನ್ನು ನೋಡುವ ಭಾಗ್ಯ ಒಲಿಯಲಿದೆ. ಲಾಕ್​ಡೌನ್​ನಿಂದ ಶೋಯಿಬ್​ ಮಲಿಕ್​-ಸಾನಿಯಾ ಮಿರ್ಜಾ ಕಳೆದ 5 ತಿಂಗಳಿಂದ ಭೇಟಿಯಾಗಿಲ್ಲ.

ತಲಾ 3 ಟೆಸ್ಟ್​ ಹಾಗೂ ಟಿ20 ಪಂದ್ಯಗಳ ಸರಣಿ ಆಡಲು ಪಾಕಿಸ್ತಾನ ತಂಡ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದೆ. ಮಲಿಕ್​ ಕೇವಲ ಟಿ20 ಪಂದ್ಯವಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪತ್ನಿ ಹಾಗೂ ಮಗನನ್ನು ನೋಡಿ ಬರುವುದಾಗಿ ಪಿಸಿಬಿಯಿಂದ ಮನವಿ ಪಡೆದಿದ್ದರು. ಆದರೆ, ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ ಇರುವುದರಿಂದ ಇದುವರೆಗೂ ಶೋಯಿಬ್​-ಸಾನಿಯಾ ಭೇಟಿ ಸಾಧ್ಯವಾಗಲಿಲ್ಲ. ಶೋಯಿಬ್​ಗೆ ಅನುಮತಿ ನೀಡಿದ್ದ ಪಿಸಿಬಿ, ಜುಲೈ 24 ರಂದು ಇಂಗ್ಲೆಂಡ್​ಗೆ ತೆರಳುವಂತೆ ಸೂಚಿಸಿದೆ. ಆಗಸ್ಟ್​ 5 ರಿಂದ ಇಂಗ್ಲೆಂಡ್​-ಪಾಕಿಸ್ತಾನ ನಡುವೆ ಟೆಸ್ಟ್​ ಸರಣಿ ಆರಂಭಗೊಂಡರೆ, ಆಗಸ್ಟ್​ 28ರಂದು ಮೊದಲ ಟಿ20 ಪಂದ್ಯ ನಡೆಯಲಿದೆ.

ಹೈದರಾಬಾದ್​ನಲ್ಲಿರುವ ಸಾನಿಯಾ ಮಿರ್ಜಾ, ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಮಗನೊಂದಿಗಿರುವ ವಿಡಿಯೋ ಶೇರ್​ ಮಾಡಿದ್ದರು. ಮೈದಾನದಲ್ಲಿ ಅಂಪೈರ್​ಗಳು ನೀಡುವಂತೆ ಬೌಂಡರಿ, ಸಿಕ್ಸರ್​ ಸಿಗ್ನಲ್​ಗಳನ್ನು ಇಜಾನ್​ ಮಾಡಿ ತೋರಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು.