ಕ್ರೀಡೆ

ಯಾರು ಈ IPL ಸುಂದರಿ?​ ಸೋಶಿಯಲ್​​ ಮೀಡಿಯಾದಲ್ಲಿ ಮಿಂಚಿದ ಧೋನಿ ಅಭಿಮಾನಿ ಪರಿಚಯ ಇಲ್ಲಿದೆ...IPL Girl

IPL Girl : ಈ ಸೋಶಿಯಲ್​ ಮೀಡಿಯಾ ಯುಗದಲ್ಲಿ ಕೆಲವರು ಕಣ್ಣು ಮಿಟುಕಿಸುವುದರಲ್ಲಿ ವೈರಲ್​ ಆಗುತ್ತಿದ್ದಾರೆ. ತಮ್ಮ ಸೌಂದರ್ಯ, ವಿಶೇಷ ನೋಟ, ಹಾವಾಭಾವದಿಂದಲೇ ನೆಟ್ಟಿಗರ ಗಮನ ಸೆಳೆದು ರಾತ್ರೋರಾತ್ರಿ ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿ ಹೊರ ಹೊಮ್ಮುತ್ತಿದ್ದಾರೆ. ಹೇಳಬೇಕೆಂದರೆ, ಈ ಡಿಜಿಟಲ್ ಯುಗದ ಶಕ್ತಿಯೇ ಅಂಥದ್ದು. ಯಾರಾದರೂ ನೆಟ್ಟಿಗರಿಗೆ ಗಮನ ಸೆಳೆದರೇ ಸಾಕು ಅವರನ್ನು ವೈರಲ್​ ಮಾಡಿಬಿಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಚೆನ್ನೈ ಸೂಪರ್​​ ಕಿಂಗ್ಸ್ (ಸಿಎಸ್​ಕೆ)​ ತಂಡದ ಅಭಿಮಾನಿಯಾಗಿರುವ ಆರ್ಯಪ್ರಿಯಾ ಭುಯಾನ್​.

ಸಿಎಸ್​ಕೆ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಐಪಿಎಲ್​ ಪಂದ್ಯದ ಸಮಯದಲ್ಲಿ ಈ ಹುಡುಗಿಯ ಹಾವಭಾವ ಮತ್ತು ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ವಿಶೇಷವಾಗಿ ಈ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ ಮಹೇಂದ್ರ ಸಿಂಗ್ ಧೋನಿ ಔಟಾದಾಗ ಆಕೆ ಕೊಟ್ಟ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ. ಈ ಕಾರಣದಿಂದಾಗಿ ಐಪಿಎಲ್ ಹುಡುಗಿ ಆರ್ಯಪ್ರಿಯಾ, ರಾತ್ರೋರಾತ್ರಿ ಲಕ್ಷಗಟ್ಟಲೆ ಫಾಲೋವರ್ಸ್ ಗಳಿಸಿ ಸಂಚಲನ ಮೂಡಿಸಿದ್ದಾಳೆ. ಈ ವೈರಲ್ ಪ್ರಸಂಗದ​ ಸಂಪೂರ್ಣ ವಿವರ ತಿಳಿಯಲು ಬಯಸಿದರೆ ನೀವು ಈ ಸ್ಟೋರಿಯನ್ನು ಓದಲೇಬೇಕಿದೆ.

ಆರ್ಯಪ್ರಿಯಾ ತಮ್ಮ ಹಾವಭಾವಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೆಲವೇ ಸೆಕೆಂಡುಗಳ ವಿಡಿಯೋ ತುಣುಕಿನೊಂದಿಗೆ ಸೂಪರ್ ವೈರಲ್ ಆದ ಐಪಿಎಲ್​ ಹುಡುಗಿ ಆರ್ಯಪ್ರಿಯಾ ಭುಯಾನ್ ಗುವಾಹಟಿ ಮೂಲದವರು. 19 ವರ್ಷದ ಆರ್ಯಪ್ರಿಯಾ, ಕೂಲ್​ ಕ್ಯಾಪ್ಟನ್​ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ದೊಡ್ಡ ಅಭಿಮಾನಿ. ಆರ್ಯಪ್ರಿಯಾ 9 ಅಥವಾ 10ನೇ ವಯಸ್ಸಿನಲ್ಲಿರುವಾಗ ಆಕೆಯ ಸಹೋದರಿ, ಸಿಎಸ್‌ಕೆ ಮತ್ತು ಧೋನಿಯನ್ನು ಆಕೆಗೆ ಪರಿಚಯಿಸಿದರು. ಅಂದಿನಿಂದ ಸಿಎಸ್​ಕೆ ಮತ್ತು ಮಿಸ್ಟರ್ ಕೂಲ್ ಧೋನಿಯ ಹುಚ್ಚು ಅಭಿಮಾನಿಯಾಗಿದ್ದಾರೆ.

ಧೋನಿ ಔಟಾದಾಗ ಏನಾಯಿತು?

ಚೆನ್ನೈ ಹಾಗೂ ರಾಜಸ್ಥಾನ ಪಂದ್ಯದ ವೇಳೆ ಚೆನ್ನೈನ ಮಾಜಿ ನಾಯಕ ಧೋನಿ ಹೊಡೆದ ಶಾಟ್‌ ಅನ್ನು ಲಾಂಗ್ ಆನ್‌ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಶಿಮ್ರಾನ್ ಹೆಟ್ಮೆಯರ್ ಅದ್ಭುತ ಕ್ಯಾಚ್ ಹಿಡಿದರು. ಚೆನ್ನೈ ಗೆಲುವಿನ ನಿರ್ಣಾಯಕ ಸಮಯದಲ್ಲಿ ಧೋನಿ ಔಟಾಗಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಈ ವೇಳೆ ಸ್ಟೇಡಿಯಂನಲ್ಲಿದ್ದ ಆರ್ಯ ಪ್ರಿಯಾ ಕೂಡ ಶಾಕ್ ಆದರು. ‘ಏಯ್, ಇದೇನಿದು’ ಎಂಬ ಮುಖಭಾವವನ್ನು ವ್ಯಕ್ತಪಡಿಸಿದರು. ಕ್ಯಾಚ್​ ಹಿಡಿದ ಆಟಗಾರನನ್ನು ಕೊಂದು ಬಿಡುತ್ತೇನೆ ಎನ್ನುವಂತೆ ಎಕ್ಸ್​ಪ್ರೆಶನ್​ ನೀಡಿದಳು. ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಾಣಿಸಿಕೊಂಡಿತು ತಕ್ಷಣ ವೈರಲ್ ಆಯಿತು.

ಆರ್‌ಆರ್ ಮತ್ತು ಸಿಎಸ್‌ಕೆ ಪಂದ್ಯದ ವೇಳೆ ಕ್ಯಾಮೆರಾಮ್ಯಾನ್​ ತನ್ನನ್ನು ಸೆರೆಹಿಡಿದಿದ್ದು, ಟಿವಿಯಲ್ಲಿ ಪ್ರದರ್ಶನಗೊಂಡಿದೆ ಅನ್ನೋದು ಆರ್ಯ ಪ್ರಿಯಾಗೆ ತಿಳಿದಿರಲಿಲ್ಲ, ಆದರೆ, ವೈರಲ್ ಐಪಿಎಲ್ ಹುಡುಗಿಯ ಫಾಲೋವರ್ಸ್​ ಸಂಖ್ಯೆ ಮಾತ್ರ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದಾರೆ. ಆರಂಭದಲ್ಲಿ ಇನ್​ಸ್ಟಾಗ್ರಾಂನಲ್ಲಿ 800 ಇದ್ದ ಫಾಲೋವರ್ಸ್​ ಸಂಖ್ಯೆ ಇದೀಗ 2 ಲಕ್ಷವನ್ನು ದಾಟಿದೆ. ಕೆಲವರು ಈ ವಿಡಿಯೋವನ್ನು ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಶೇರ್ ಮಾಡಿದ್ದಾರೆ. ಇನ್ನು ಕೆಲವರು ಕ್ರಷ್ ಎಂದು ಕಮೆಂಟ್ ಮಾಡಿದ್ದಾರೆ. ಏನೇ ಆಗಲಿ ವೈರಲ್ ವಿಡಿಯೋದೊಂದಿಗೆ ಆರ್ಯ ಪ್ರಿಯಾ ಸಾಮಾಜಿಕ ಜಾಲತಾಣದ ತಾರೆ ಮತ್ತು 'ಮೀಮ್ಸ್​ ಗರ್ಲ್' ಆಗಿ ಹೊರಹೊಮ್ಮಿದ್ದಾರೆ.

ಈ ಬಗ್ಗೆ ಆರ್ಯ ಪ್ರಿಯಾ ಹೇಳಿದ್ದೇನು?

ನಾನು ಸಾಮಾಜಿಕ ಜಾಲತಾಣದಲ್ಲಿ ಅಷ್ಟೊಂದು ಸಕ್ರಿಯಳಾಗಿಲ್ಲ. ನನಗೆ ಕೆಲವೇ ಫಾಲೋವರ್ಸ್​ ಇದ್ದರು. ನಾನು ಕೆಲವೊಮ್ಮೆ ಪ್ರಯಾಣದ ಫೋಟೋಗಳನ್ನು ಮಾತ್ರ ಪೋಸ್ಟ್ ಮಾಡುತ್ತಿದ್ದೆ. ಎಂಎಸ್ ಧೋನಿಯ ವಿಕೆಟ್‌ಗೆ ತನ್ನ ಪ್ರತಿಕ್ರಿಯೆಯನ್ನು ತೋರಿಸುವ ವಿಡಿಯೋ ವೈರಲ್ ಆದ ನಂತರ, ರಾತ್ರೋರಾತ್ರಿ ಫಾಲೋವರ್ಸ್​ ಸಂಖ್ಯೆ ಲಕ್ಷಕ್ಕೆ ಏರಿತು ಎಂದು ರಾಷ್ಟ್ರೀಯ ಮಾಧ್ಯಮಕ್ಕೆ ಆರ್ಯ ಪ್ರಿಯಾ ತಿಳಿಸಿದರು.

ಧೋನಿ ಔಟಾಗುತ್ತಾರೆ ಎಂದು ಆಕೆ ನಿರೀಕ್ಷಿಸಿರಲಿಲ್ಲ. ಧೋನಿ ಕ್ಯಾಚ್ ಔಟ್ ಆದಾಗ ಶಾಕ್​ ಆದೆ. ಹೀಗಾಗಿ ಆ ರೀತಿ ಪ್ರತಿಕ್ರಿಯಿಸಿದೆ. ಇದು ಆಕಸ್ಮಿಕವಾಗಿ ನಡೆದಿದ್ದು, ಆದ್ರೆ ವೈರಲ್ ಆಗಿದೆ ಎಂದು ಆರ್ಯ ಪ್ರಿಯಾ ಹೇಳಿದರು. ಸದ್ಯಕ್ಕೆ ನಾನು ಮತ್ತು ತನ್ನ ಕುಟುಂಬದವರು ಇದರಿಂದ ಸಂತಸಗೊಂಡಿರುವುದಾಗಿ ತಿಳಿಸಿದರು. (ಏಜೆನ್ಸೀಸ್​)