ಕ್ರೀಡೆ

ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಸಾಧನೆಗಾಗಿ ಶಮಿ-ಜಂಪಾ ಪೈಪೋಟಿ; ಗರಿಷ್ಠ ರನ್​ ಸಾಧಕ ಈಗಾಗಲೆ ಫಿಕ್ಸ್​!

ಅಹಮದಾಬಾದ್: ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟರ್ ವಿರಾಟ್​ ಕೊಹ್ಲಿ ವಿಶ್ವಕಪ್​ನಲ್ಲಿ 10 ಪಂದ್ಯಗಳಲ್ಲಿ 711 ರನ್​ ಸಿಡಿಸಿ ಗರಿಷ್ಠ ರನ್​ ಸ್ಕೋರರ್​ ಆಗಿದ್ದು, ಫೈನಲ್​ನಲ್ಲಿ ಯಾರಾದರೂ ಅವರನ್ನು ಹಿಂದಿಕ್ಕುವುದು ಕಷ್ಟ.

2ನೇ ಸ್ಥಾನಿ ಕ್ವಿಂಟನ್​ ಡಿಕಾಕ್​ (594), 3ನೇ ಸ್ಥಾನಿ ರಚಿನ್​ ರವೀಂದ್ರ (578), 4ನೇ ಸ್ಥಾನಿ ಡೆರಿಲ್​ ಮಿಚೆಲ್​ (552) ಹೊರಬಿದ್ದಿದ್ದರೆ, 4ನೇ ಸ್ಥಾನ ರೋಹಿತ್​ ಶರ್ಮ (550) ಕೊಹ್ಲಿಗಿಂತ 161 ರನ್​ ಹಿಂದಿದ್ದಾರೆ. 6ನೇ ಸ್ಥಾನಿ ಡೇವಿಡ್​ ವಾರ್ನರ್​ (528) ಕೂಡ 183 ರನ್​ ಹಿಂದಿದ್ದಾರೆ. ಹೀಗಾಗಿ ಕೊಹ್ಲಿ ಟೂರ್ನಿಯ ಗರಿಷ್ಠ ರನ್​ಸ್ಕೋರರ್​ ಎನಿಸುವುದು ಬಹುತೇಕ ನಿಶ್ಚಿತ.

ಆದರೆ ಗರಿಷ್ಠ ವಿಕೆಟ್​ ಸಾಧನೆಗೆ ಮೊಹಮದ್​ ಶಮಿ (23) ಮತ್ತು ಆಡಂ ಜಂಪಾ (22) ನಡುವೆ ನಿಕಟ ಪೈಪೋಟಿ ಏರ್ಪಡಲಿದೆ. ಫೈನಲ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದವರಿಗೆ ಈ ಗೌರವ ಒಲಿಯಲಿದೆ.