ಕ್ರೀಡೆ

ಕೋಪದಿಂದ ಮೊಹಮ್ಮದ್​ ರಿಜ್ವಾನ್​ ಮುಖಕ್ಕೆ ಬಾಲ್​ ಎಸೆದ ಶಕೀಬ್ ಅಲ್​ ಹಸನ್​ಗೆ​​ ಐಸಿಸಿ ಶಾಕ್!​

ಇಸ್ಲಮಾಬಾದ್​: ಬಾಂಗ್ಲಾದೇಶದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮೈದಾನದಲ್ಲಿ ಮತ್ತೊಮ್ಮೆ ಅನುಚಿತವಾಗಿ ವರ್ತಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಶಕೀಬ್ ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರ ಮುಖದ ಮೇಲೆ ಚೆಂಡನ್ನು ಎಸೆದಿದ್ದರು. ಈ ಕಾರಣದಿಂದಾಗಿ ಐಸಿಸಿ ಶಕೀಬ್ ಅವರ ಪಂದ್ಯ ಶುಲ್ಕವನ್ನು ಶೇ.10 ರಷ್ಟು ಕಡಿತಗೊಳಿಸಿದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಶಕೀಬ್​ ಡಿಮೆರಿಟ್ ಅಂಕವನ್ನೂ ಪಡೆದಿದ್ದಾರೆ.

ಟೆಸ್ಟ್​ ಪಂದ್ಯದ ಕೊನೆಯ ದಿನ (ಭಾನುವಾರ) ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಬೌಲಿಂಗ್ ಮಾಡಲು ಶಕೀಬ್ ಸಿದ್ಧವಾಗಿದ್ದರೂ, ಕೊನೆಯ ಕ್ಷಣದಲ್ಲಿ ರಿಜ್ವಾನ್ ಸ್ಟ್ರೈಕ್‌ನಿಂದ ಹಿಂದೆ ಸರಿದರು. ಇದರಿಂದ ಕೋಪಗೊಂಡ ಶಕೀಬ್, ರಿಜ್ವಾನ್ ಮೇಲೆ ಚೆಂಡನ್ನು ಎಸೆದರು. ಇದನ್ನು ಗಮನಿಸಿದ ಆನ್ ಫೀಲ್ಡ್ ಅಂಪೈರ್ ರಿಚರ್ಡ್ ಕೆಟಲ್ ಬರೋ ಕೂಡಲೇ ಶಕೀಬ್​ಗೆ ಛೀಮಾರಿ ಹಾಕಿದರು.

ಐಸಿಸಿ ನಿಯಮಗಳ ಪ್ರಕಾರ, ಬಾಲ್ ಅಥವಾ ಇತರ ವಸ್ತುವನ್ನು ಆಟಗಾರರ ಮೇಲೆ ಅಥವಾ ಅವರ ಬಳಿ ಎಸೆಯುವುದು ಲೆವೆಲ್ 1 ಅಪರಾಧವಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಅಡಿಯಲ್ಲಿ ಶಕೀಬ್‌ಗೆ ದಂಡ ವಿಧಿಸಲಾಗಿದೆ.

ಇದೇ ಪಂದ್ಯದಲ್ಲಿ ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿಗೆ ಐಸಿಸಿ ಶಾಕ್ ನೀಡಿದೆ. ಪಾಕಿಸ್ತಾನಕ್ಕೆ ಆರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಗಳನ್ನು ಮತ್ತು ಬಾಂಗ್ಲಾದೇಶಕ್ಕೆ ಮೂರು WTC ಅಂಕಗಳನ್ನು ಕಡಿತಗೊಳಿಸಲಾಗಿದೆ. ಈ ಅಂಕಗಳ ಕಡಿತವು WTC ಪಾಯಿಂಟ್‌ಗಳ ಪಟ್ಟಿಯಲ್ಲಿ ಆಯಾ ತಂಡಗಳ ಸ್ಥಾನಗಳ ಮೇಲೆ ಪರಿಣಾಮ ಬೀರಿದೆ. ಮೂರು ಅಂಕ ಕಳೆದುಕೊಂಡ ಬಾಂಗ್ಲಾದೇಶ ಏಳನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನದ ಅಂಕಗಳು ಮತ್ತಷ್ಟು ಕುಸಿದು ಎಂಟನೇ ಸ್ಥಾನಕ್ಕೆ ಸೀಮಿತವಾಗಿದೆ.

ಪಂದ್ಯ ವಿಚಾರಕ್ಕೆ ಬರುವುದಾದರೆ, ರಾವಲ್ಪಿಂಡಿಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 565 ರನ್ ಗಳಿಸಿ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಬಾಂಗ್ಲಾದೇಶದ ಬೌಲರ್‌ಗಳು, ಪಾಕ್ ತಂಡವನ್ನು 146 ರನ್‌ಗಳಿಗೆ ಆಲೌಟ್ ಆಯಿತು. 30 ರನ್​ಗಳ ಸಣ್ಣ ಗುರಿಯನ್ನು ಮುರಿಯಲು ಕಣಕ್ಕೆ ಇಳಿದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಆಗಸ್ಟ್ 30 ರಂದು ಇದೇ ಮೈದಾನದಲ್ಲಿ ನಡೆಯಲಿದೆ. (ಏಜೆನ್ಸೀಸ್​)